ಬಜೆಟ್ ಅಧಿವೇಶನ ಜುಲೈ 2ರಿಂದ ಆರಂಭವಾಗಲಿದ್ದು, ಜುಲೈ 6 ರಂದು ಸಾರ್ವತ್ರಿಕ ಬಜೆಟ್ ಮಂಡನೆ ಸಂದರ್ಭದಲ್ಲಿ ಆದಾಯ ತೆರಿಗೆ ವಿನಾಯತಿಯನ್ನು ಹೆಚ್ಚಿಸುವ ಸಾಧ್ಯತೆಗಳಿವೆ ಎಂದು ಸಂಸತ್ತಿನ ಮೂಲಗಳು ತಿಳಿಸಿವೆ.
ಸೆಕ್ಷನ್ 80 ಸಿ ಅನ್ವಯ ತೆರಿಗೆ ವಿನಾಯಿತಿಯನ್ನು 1 ಲಕ್ಷ ರೂಪಾಯಿಗಳಿಂದ 1.5 ಲಕ್ಷ ರೂಪಾಯಿಗಳಿಗೆ ಏರಿಕೆ ಮಾಡಲಾಗುವುದು. ಇದರಿಂದಾಗಿ ಮೂಲಸೌಕರ್ಯ ಕ್ಷೇತ್ರಗಳಲ್ಲಿ ತೆರಿಗೆ ರಹಿತ ಹೂಡಿಕೆಗಳಿಗೆ ಸಹಾಯಕವಾಗಲಿದೆ. ಕೇಂದ್ರ ಸರಕಾರ ಕೂಡಾ ಮೂಲಸೌಕರ್ಯ ಹಾಗೂ ಗೃಹ ನಿರ್ಮಾಣ ಕ್ಷೇತ್ರದ ಬಾಂಡ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ ಎಂದು ಮೂಲಗಳು ತಿಳಿಸಿವೆ..
ಏತನ್ಮಧ್ಯೆ, ಸಂಸತ್ತಿನಲ್ಲಿ ನಡೆಯುವ ಬಜೆಟ್ ಅಧಿವೇಶನದ ವೇಳಾಪಟ್ಟಿಯನ್ನು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ನೇತೃತ್ವದ ಸಚಿವ ಸಂಪುಟ ನಿರ್ಧರಿಸಲಿದೆ ಎಂದು ಸಂಸತ್ತಿನ ಮೂಲಗಳು ವರದಿ ಮಾಡಿವೆ.
ಕೇಂದ್ರ ರೈಲ್ವೆ ಖಾತೆ ಸಚಿವೆ ಮಮತಾ ಬ್ಯಾನರ್ಜಿ ಜುಲೈ 3 ರಂದು ರೈಲ್ವೆ ಬಜೆಟ್ ಮಂಡಿಸಲಿದ್ದಾರೆ. ಆರ್ಥಿಕ ಸಮೀಕ್ಷೆ ಮಂಡನೆಯಿಂದ ಪ್ರಾರಂಭವಾಗುವ ಬಜೆಟ್ ಅಧಿವೇಶನ, ಜುಲೈ 2 ರಿಂದ ಆರಂಭವಾಗಿ ಅಗಸ್ಟ್ 7 ರವರೆಗೆ ನಡೆಯಲಿದೆ.
ಕೇಂದ್ರ ಸರಕಾರ ಜುಲೈ 31ರೊಳಗಾಗಿ ಬಜೆಟ್‌ಗೆ ಅನುಮೋದನೆ ಪಡೆಯುವ ನಿರೀಕ್ಷೆಯಲ್ಲಿದ್ದು,ಇಲ್ಲವಾದಲ್ಲಿ ಸಂಸದರಿಂದ ವೋಟ್ -ಆನ್-ಅಂಕೌಂಟ್ ಅನುಮೋದನೆ ಪಡೆಯಬೇಕಾಗುತ್ತದೆ ಎನ್ನಲಾಗಿದೆ.
ಆರ್ಥಿಕ ಸಮೀಕ್ಷೆ ಮಂಡನೆ, ರೈಲ್ವೆ ಬಜೆಟ್ ಮತ್ತು ಸಾರ್ವತ್ರಿಕ ಬಜೆಟ್ ನಂತರ ಸಚಿವರುಗಳಿಗೆ ಬಜೆಟ್‌ನಲ್ಲಿ ಅಗತ್ಯವಾದ ಬೇಡಿಕೆಗಳನ್ನು ಮಂಡಿಸಲು ಚರ್ಚೆಗೆ ಅವಕಾಶ ನೀಡಲಾಗುವುದು ಎಂದು ಸಂಸತ್ತಿನ ಮೂಲಗಳು ತಿಳಿಸಿವೆ. |