ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಚೈತನ್ಯ ನೀಡಲು ಗೃಹ ಖರೀದಿಗಾಗಿ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವಂತಾಗಬೇಕು ಎಂದು ನಗರಾಭಿವೃದ್ಧಿ ಸಚಿವ ಜೈಪಾಲ್ ರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ. ರಿಯಲ್ ಎಸ್ಟೇಟ್ ಉದ್ಯಮ ಆರ್ಥಿಕ ಕುಸಿತವನ್ನು ಎದುರಿಸುತ್ತಿದೆ. ಆದ್ದರಿಂದ ಬಡವರಿಗೆ ಗೃಹ ಖರೀದಿಗಾಗಿ 5 ಲಕ್ಷ ಮಿತಿಯಡಿಯಲ್ಲಿ ಶೇ.6.5 ರಷ್ಟು ಬಡ್ಡಿ ದರದಲ್ಲಿ ಸಾಲ ನೀಡುವ ವ್ಯವಸ್ಥೆ ಮಾಡಬೇಕಾಗಿದೆ ಎಂದು ಸಚಿವ ಜೈಪಾಲ್ ರೆಡ್ಡಿ ವಿತ್ತ ಸಚಿವ ಪ್ರಣಬ್ ಮುಖರ್ಜಿಯವರೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗಾರರಿಗೆ ತಿಳಿಸಿದರು. ಇದೊಂದು ಪೂರ್ವ ಬಜೆಟ್ ಸಭೆ . ಸಭೆಯಲ್ಲಿ ಬಜೆಟ್‌ಗೆ ಸಂಬಂಧಿಸಿದಂತೆ ಕೆಲ ವಿಷಯಗಳ ಬಗ್ಗೆ ಹಣಕಾಸು ಸಚಿವ ಪ್ರಣಬ್ ಮುಖರ್ಜಿಯವರೊಂದಿಗೆ ಚರ್ಚಿಸಲಾಯಿತು ಎಂದು ಸಚಿವ ರೆಡ್ಡಿ ಸುದ್ದಿಗಾರರಿಗೆ ತಿಳಿಸಿದರು. ಗೃಹ ಖರೀದಿಗಾಗಿ ಪ್ರಸ್ತುತ 20 ಲಕ್ಷದವರೆಗಿನ ಸಾಲವನ್ನು ಶೇ.7.5 ರಷ್ಟು ಬಡ್ಡಿ ದರದಲ್ಲಿ ನೀಡಲಾಗುತ್ತಿದ್ದು,ಅದನ್ನು ಶೇ.6.5ಕ್ಕೆ ಇಳಿಕೆ ಮಾಡಿ ಸಾಲ ವಿತರಣೆಯ ವ್ಯವಸ್ಥೆಯಾದಲ್ಲಿ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಚೇತರಿಕೆ ನೀಡಿದಂತಾಗುತ್ತದೆ ಎಂದು ಸಚಿವ ರೆಡ್ಡಿ ತಿಳಿಸಿದ್ದಾರೆ. ಮುಂದಿನ ವರ್ಷದಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಪಂದ್ಯಗಳಿಗಾಗಿ ಡಿಎಂಆರ್‌ಸಿ ಮತ್ತು ಜೆಎನ್‌ಎನ್‌ಯುಆರ್‌ಎಂ ಯೋಜನೆಗಳಿಗೆ ಬಜೆಟ್‌ನಲ್ಲಿ ಹೆಚ್ಚುವರಿ ಅವಕಾಶ ನೀಡುವುದು ಅಗತ್ಯವಾಗಿದೆ ಎಂದು ಸಚಿವ ಜೈಪಾಲ್ ರೆಡ್ಡಿ ಹೇಳಿದ್ದಾರೆ. |