ಲೋಕಸಭೆಯಲ್ಲಿ ಜುಲೈ 6 ರಂದು ಸಾರ್ವತ್ರಿಕ ಬಜೆಟ್ ಮಂಡನೆಯಾಗುತ್ತಿರುವ ಹಿನ್ನೆಲೆಯಲ್ಲಿ ರಿಟೇಲ್ , ವಾಹನೋದ್ಯಮ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳಿಗೆ ಹೆಚ್ಚಿನ ಪ್ರೋತ್ಸಾಹ ದೊರೆಯುವ ಸಾಧ್ಯತೆಗಳಿವೆ ಎಂದು ಉದ್ಯಮಿಗಳು ನಿರೀಕ್ಷಿಸಿದ್ದಾರೆ.ಸಾಗರೋತ್ತರ ರಾಷ್ಟ್ರಗಳಲ್ಲಿ ಹಣದುಬ್ಬರ ಚಿಂತೆ ,ಆರ್ಥಿಕ ಕುಸಿತ ಮತ್ತು ದೇಶದ ಆರ್ಥಿಕತೆಯ ನಿಧಾನಗತಿಯ ಚೇತರಿಕೆ ದೇಶದ ಗ್ರಾಹಕರನ್ನು ಕಾಡುತ್ತಿದೆ . ಕಳೆದ 2008ರ ಆರಂಭಿಕ ಆರು ತಿಂಗಳುಗಳಿಗೆ ಹೋಲಿಸಿದಲ್ಲಿ ಒಟ್ಟಾರೆ ಗ್ರಾಹಕರ ಆತ್ಮವಿಶ್ವಾಸ ಶೇ.23 ಪಾಯಿಂಟ್‌ಗಳಷ್ಟು ಕುಸಿತ ಕಂಡಿದೆ.ಭಾರತದ ಗ್ರಾಹಕರಲ್ಲಿ ಶೇ 100 ರಷ್ಟು ಆತ್ಮವಿಶ್ವಾಸ ಕಡಿಮೆಯಾಗಿದೆ ಎಂದು ಮೂಲಗಳು ತಿಳಿಸಿವೆ.ಸೆಪ್ಟೆಂಬರ್ 2008 ರವರೆಗೆ ವಾಹನೋದ್ಯಮ ಕ್ಷೇತ್ರ ಉತ್ತಮ ಚೇತರಿಕೆ ಕಂಡಿದ್ದರೂ 2008ರ ನವೆಂಬರ್ ತಿಂಗಳಲ್ಲಿ ಅಕಸ್ಮಿಕವಾಗಿ ಶೇ.24 ರಷ್ಟು ಕುಸಿತ ಕಂಡಿತು. ಆದರೆ , ಕೆಲ ಏರಿಳಿತಗಳ ನಂತರ ಏಪ್ರಿಲ್ ತಿಂಗಳಲ್ಲಿ ಮತ್ತೆ ಚೇತರಿಕೆ ಕಂಡು ಗ್ರಾಹಕರನ್ನು ಶೋರೂಮ್‌ಗಳತ್ತ ಸೆಳೆಯಲು ವಾಹನೋದ್ಯಮ ಯಶಸ್ವಿಯಾಯಿತು. ಚೇತರಿಕೆ ಕಂಡಿದ್ದ ರಿಟೇಲ್ ಕ್ಷೇತ್ರ 2008ರಲ್ಲಿ 2 ಲಕ್ಷ ಕೋಟಿ ರೂಪಾಯಿಗಳ ಇಳಿಕೆ ಕಂಡಿತು. ವರ್ಷಾಂತ್ಯದ ವೇಳೆಗೆ ಸುಮಾರು 3 ಲಕ್ಷ ಕೋಟಿ ರೂಪಾಯಿಗಳ ಕುಸಿತ ಕಂಡು ರಿಟೇಲ್ ಕ್ಷೇತ್ರವನ್ನು ತಲ್ಲಣಗೊಳಿಸಿತು. ಆದರೆ, ಮುಂಬರುವ ಎರಡು ವರ್ಷಗಳಲ್ಲಿ ವಾಹನೋದ್ಯಮ ಹಾಗೂ ರಿಟೇಲ್ ಕ್ಷೇತ್ರಗಳು ಚೇತರಿಕೆ ಕಾಣುವ ಸಾಧ್ಯತೆಗಳು ಕಂಡುಬರುತ್ತಿವೆ.ದೇಶದ ಪ್ರವಾಸೋದ್ಯಮ ಕ್ಷೇತ್ರ ಆರ್ಥಿಕವಾಗಿ ಹೀನಾಯ ಸ್ಥಿತಿಯಲ್ಲಿದೆ. ಜಾಗತಿಕ ಆರ್ಥಿಕ ಕುಸಿತ ,ಇತ್ತೀಚೆಗೆ ನಡೆದ ಮುಂಬೈ ಉಗ್ರರ ದಾಳಿಯಿಂದಾಗಿ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಮುಖವಾಗಿ ವಿಮಾನಯಾನ ಕ್ಷೇತ್ರ ಮತ್ತು ಹೋಟೆಲ್ ಉದ್ಯಮಗಳು ಭಾರಿ ನಷ್ಟವನ್ನು ಅನುಭವಿಸುತ್ತಿವೆ. ದೇಶದ ವಿಮಾನಯಾನ ಕ್ಷೇತ್ರ ಕಳೆದ ವರ್ಷದಲ್ಲಿ 4 ಸಾವಿರ ಕೋಟಿ ರೂಪಾಯಿಗಳ ನಷ್ಟವನ್ನು ಎದುರಿಸುತ್ತಿದ್ದು, ಹೋಟೆಲ್ ಉದ್ಯಮ ಕೂಡಾ ಶೇ.50 ರಷ್ಟು ಕುಸಿತ ಕಂಡಿದೆ.ಎಸಿ ನಿಲ್ಸನ್ ಅವರ ಸಮೀಕ್ಷೆಯ ಪ್ರಕಾರ ದೇಶದ ಶೇ.56 ರಷ್ಟು ಜನರು ಮುಂಬರುವ 12 ತಿಂಗಳುಗಳಲ್ಲಿ ಆರ್ಥಿಕತೆ ಸುಸ್ಥಿತಿಗೆ ಬರಲಿದೆ ಎಂದು ಆತ್ಮವಿಶ್ವಾಸ ಹೊಂದಿದ್ದಾರೆ. ಉಳಿದ ಶೇ.44 ರಷ್ಟು ಜನರು , ದೇಶದ ಆರ್ಥಿಕತೆಯಲ್ಲಿ ಚೇತರಿಕೆ ಕಂಡುಬಂದಿದ್ದು, ಮುಂಬರುವ 2009ರ ಬಜೆಟ್‌ನಿಂದಾಗಿ ಆರ್ಥಿಕ ಚೇತರಿಕೆ ಕಂಡುಬರಲಿದೆ ಎಂದು ಹೇಳಿದ್ದಾರೆ. |