ಇಟಲಿಯ ಪ್ರಮುಖ ವಾಹನೋದ್ಯಮ ಸಂಸ್ಥೆ ಫಿಯೆಟ್ , ಬಹು ನಿರೀಕ್ಷಿತ ಪೆಟ್ರೋಲ್ ಮತ್ತು ಡೀಸೆಲ್ ಚಾಲಿತ ಸಣ್ಣ ಕಾರು ಗ್ರಾಂಡೆ ಪುಂಟೊ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, 3.99 ಲಕ್ಷ ರೂಪಾಯಿಗಳಿಂದ 6.11 ಲಕ್ಷ ರೂಪಾಯಿಗಳವರೆಗೆ (ಶೋರೂಂ ಹೊರತುಪಡಿಸಿ,ದೆಹಲಿ ) ದರ ನಿಗದಿಪಡಿಸಿದೆ ಎಂದು ಮೂಲಗಳು ತಿಳಿಸಿವೆ.
ಭಾರತದ ವಾಹನೋದ್ಯಮ ಕ್ಷೇತ್ರದಲ್ಲಿ ಗ್ರಾಂಡೆ ಪುಂಟೊ ಕಾರು ಬಿಡುಗಡೆ ಮಾಡಿರುವುದು ಒಂದು ಮೈಲುಗಲ್ಲಾಗಿದ್ದು, ಇಟಲಿಯ ಮಾಡೆಲ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ ಎಂದು ಫಿಯೆಟ್ ಇಂಡಿಯಾ ಅಟೋಮೊಬೈಲ್ಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಜೀವ್ ಕಪೂರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಸಣ್ಣ ಕಾರುಗಳ ಕ್ಷೇತ್ರ ನಿಗದಿತದಾಗಿರುವುದರಿಂದ ಗ್ರಾಹಕರು ಅಂತಾರಾಷ್ಟ್ರೀಯ ಮಾಡೆಲ್‌ಗಳ ಕಾರನ್ನು ಹೊಂದಲು ಬಯಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಗ್ರಾಂಡೆ ಪುಂಟೊ ಕಾರನ್ನು ಕಳೆದ 2005ರಲ್ಲಿ ಯುರೋಪ್‌ನಲ್ಲಿ ಬಿಡುಗಡೆ ಮಾಡಲಾಗಿತ್ತು. ಮಹಾರಾಷ್ಟ್ರದ ರಂಜನ್‌ಗಾಂವ್‌ನಲ್ಲಿರುವ ಫಿಯೆಟ್ ಘಟಕದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳನ್ನು ತಯಾರಿಸಲಾಗುವುದು ಎಂದು ಹೇಳಿದ್ದಾರೆ.
ಪೆಟ್ರೋಲ್ ಚಾಲಿತ ಗ್ರಾಂಡೆ ಪುಂಟೊ ಕಾರು 3.99-5.61 ಲಕ್ಷ ರೂಪಾಯಿಗಳವರೆಗೆ ದರ ನಿಗದಿಪಡಿಸಲಾಗಿದ್ದು, ಡೀಸೆಲ್ ಕಾರನ್ನು 4.85-6.11 ಲಕ್ಷ ರೂಪಾಯಿಗಳವರೆಗೆ ದರ ನಿಗದಿಪಡಿಸಲಾಗಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
ಫಿಯೆಟ್ ಇಂಡಿಯಾ ಅಟೋಮೊಬೈಲ್ಸ್ ಸಂಸ್ಥೆ ಇಟಲಿ ಮೂಲದ ಫಿಯೆಟ್ ಸ್ಪಾ ಕಂಪೆನಿಯೊಂದಿಗೆ ಶೇ.50 ರಷ್ಟು ಜಂಟಿ ಸಹಭಾಗಿತ್ವದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ದೇಶದ ಪ್ರಮುಖ ಕಾರು ತಯಾರಿಕೆ ಸಂಸ್ಥೆ ಟಾಟಾ ಮೋಟಾರ್ಸ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದೆ.
ದೇಶದಾದ್ಯಂತ ಗ್ರಾಂಡೆ ಪುಂಟೊ ಕಾರುಗಳನ್ನು ಟಾಟಾ-ಫಿಯೆಟ್‌ನ 100 ಡೀಲರ್‌ಗಳ ಮೂಲಕ ಮಾರಾಟ ಮಾಡಲಾಗುವುದು ಎಂದು ಕಂಪೆನಿಯ ಮೂಲಗಳು ತಿಳಿಸಿವೆ. |