ಟಾಟಾ ಟೆಲಿಸರ್ವಿಸಸ್ ಕಂಪೆನಿ , ಇಸ್ರೆಲ್ ಮೂಲದ ನೆಟ್‌ವರ್ಕಿಂಗ್ ಇನ್‌ಫ್ರಾಸ್ಟ್ರಕ್ಚರ್ ಸಲ್ಯೂಶನ್ಸ್ ಪ್ರೋವೈಡರ್ ಕಂಪೆನಿ ಇಸಿಐ ಟೆಲಿಕಾಂನೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಭಾರತದಲ್ಲಿ ಪ್ರಥಮ ಬಾರಿಗೆ ಅತ್ಯಧಿಕ ವೇಗದ ಬ್ರಾಡ್‌ಬ್ಯಾಂಡ್ ಸೇವೆ ನೀಡುವುದಾಗಿ ಹೇಳಿಕೊಂಡಿದೆ. ಇಸಿಐ ನೆಟ್‌ವರ್ಕ್ ಸಲ್ಯೂಶನ್, ಪ್ರತಿ ಸೆಕೆಂಡ್‌ಗೆ 18 ಮೆಗಾಬಿಟ್ ವೇಗದ ಬ್ರಾಡ್‌ಬ್ಯಾಂಡ್ ಸಂಪರ್ಕ ನೀಡಲು ಸಹಕಾರ ನೀಡುತ್ತಿದೆ ಎಂದು ಟಾಟಾ ಟೆಲಿ ಸರ್ವಿಸಸ್ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ. ಏಪ್ರಿಲ್ ತಿಂಗಳ ಅವಧಿಯಲ್ಲಿ ಏರ್‌ಟೆಲ್ ಟೆಲಿಕಾಂ ಸಂಸ್ಥೆ ಪ್ರತಿ ಸೆಕೆಂಡ್‌ಗೆ 16 ಮೆಗಾಬಿಟ್ ವೇಗದ ಬ್ರಾಡ್‌ಬ್ಯಾಂಡ್ ಸೇವೆಯನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿತ್ತು. ಆದರೆ ಟಾಟಾ ಟೆಲಿಸರ್ವಿಸಸ್ ಪ್ರತಿ ಸೆಕೆಂಡ್‌ಗೆ 18 ಮೆಗಾಬಿಟ್ ವೇಗದ ಸಂಪರ್ಕ ಕಲ್ಪಿಸುವ ದೇಶದ ಮೊದಲ ಸಂಸ್ಥೆಯಾಗಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ. ಐಪಿಟಿವಿ ,ವೀಡಿಯೋ ಆನ್-ಡಿಮ್ಯಾಂಡ್ , ಹೈ ಸ್ಪೀಡ್ ಬ್ರಾಡ್‌ಬ್ಯಾಂಡ್ ಇಂಟರ್‌ನೆಟ್ ,ವೈಸ್ ಒವರ್ ಇಂಟರ್‌ನೆಟ್ ಪ್ರೋಟೋಕಾಲ್ ಮತ್ತು ಇತರ ಸೇವೆಗಳನ್ನು ಒದಗಿಸಲು ಇಸಿಐ ಸಲ್ಯೂಶನ್ಸ್ ನೆರವು ಒದಗಿಸುತ್ತದೆ ಎಂದು ತಿಳಿಸಿದೆ. ಇಸಿಐ ಸಲ್ಯೂಶನ್ಸ್ ಸಂಸ್ಥೆ ಬ್ರಾಡ್‌ಬ್ಯಾಂಡ್ ಸಂಪರ್ಕ ಸೇವೆಯಲ್ಲಿ ನುರಿತ ಸಂಸ್ಥೆಯಾಗಿದ್ದರಿಂದ ಅದನ್ನು ಆಯ್ಕೆ ಮಾಡಲಾಗಿದೆ ಎಂದು ಟಾಟಾ ಟೆಲಿಸರ್ವಿಸಸ್ ಅಧ್ಯಕ್ಷ ಹಾಗೂ ತಾಂತ್ರಿಕ ಮುಖ್ಯಸ್ಥ ಎ.ಜಿ.ರಾವ್ ಹೇಳಿದ್ದಾರೆ. |