ಪ್ರಯಾಣಿಕ ದರವನ್ನು ಹೆಚ್ಚಳ ಮಾಡದೆ ಐದು ವರ್ಷಗಳ ಅವಧಿಗೆ ತಮ್ಮ ಕಾರ್ಯಾಭಾರವನ್ನು ಮುಕ್ತಾಯಗೊಳಿಸಿ ಲಾಲೂ ಪ್ರಸಾದ್ ಯಾದವ್ ಹೆಮ್ಮೆಪಟ್ಟುಕೊಂಡಿರಬಹುದು ಆದರೆ , ಪ್ರಯಾಣಿಕ ದರ ಹೆಚ್ಚಳ ಮಾಡದೇ ಇರುವುದರಿಂದ ವಾರ್ಷಿಕವಾಗಿ ರೈಲ್ವೆ ಸಚಿವಾಲಯ 3 ಸಾವಿರ ಕೋಟಿ ಆದಾಯದಲ್ಲಿ ನಷ್ಟ ಅನುಭವಿಸುತ್ತಿದೆ ಎಂದು ಹೇಳಿಕೆ ನೀಡಿದೆ. ಕಳೆದ ಐದು ವರ್ಷಗಳ ಅವಧಿಯಲ್ಲಿ ಕೇಂದ್ರ ರೈಲ್ವೆ ಖಾತೆಯನ್ನು ಹೊಂದಿದ್ದ ಮಾಜಿ ಸಚಿವ ಲಾಲೂ ಪ್ರಸಾದ್,ಪ್ರಯಾಣಿಕ ದರದಲ್ಲಿ ಏರಿಕೆ ಮಾಡದ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆ ವಾರ್ಷಿಕವಾಗಿ 3 ಸಾವಿರ ಕೋಟಿ ರೂಪಾಯಿ ನಷ್ಟ ಅನುಭವಿಸುತ್ತಿದೆ ಎಂದು ಸಚಿವಾಲಯದ ಮೂಲಗಳು ಮಾಧ್ಯಮಗಳಿಗೆ ತಿಳಿಸಿವೆ. ಜಾಗತಿಕ ಆರ್ಥಿಕ ಕುಸಿತದ ಪರಿಣಾಮವನ್ನು ಎದುರಿಸುತ್ತಿರುವ ರೈಲ್ವೆ ಇಲಾಖೆ , ಪ್ರಯಾಣಿಕ ದರದಲ್ಲಿ ಕೂಡಾ ಏರಿಕೆಯಾಗದಿರುವುದರಿಂದ ನಿಗದಿತ ಆದಾಯದ ಗುರಿಯನ್ನು ತಲುಪಲು ಹೋರಾಟ ನಡೆಸಲಾಗುತ್ತಿದೆ. ಜುಲೈ 3 ರಂದು ನೂತನ ಬಜೆಟ್ ಮಂಡನೆಯಾಗಲಿದ್ದರೂ ಸಾಗಾಣಿಕೆ ಹಾಗೂ ಪ್ರಯಾಣಿಕ ದರದಲ್ಲಿ ಹೆಚ್ಚಳವಾಗುವ ಸಾಧ್ಯತೆಗಳಿಲ್ಲ ಎಂದು ಸಚಿವಾಲಯದ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ. ಆರನೇ ವೇತನ ಆಯೋಗದ ಶಿಫಾರಸ್ಸಿನಂತೆ ಪ್ರಸಕ್ತ ವರ್ಷದಲ್ಲಿ 14 ಸಾವಿರ ಕೋಟಿ ರೂಪಾಯಿ ಆದಾಯದ ಗುರಿಯನ್ನು ತಲುಪಬೇಕಾಗಿದೆ. ಆದರೆ ನೂತನ ರೈಲ್ವೆ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಮಮತಾ ಬ್ಯಾನರ್ಜಿ ರಾಜಕೀಯ ಕಾರಣಗಳಿಂದ ಮತ್ತಷ್ಟು ದರಗಳನ್ನು ಕಡಿತಗೊಳಿಸಿದಲ್ಲಿ ಮತ್ತಷ್ಟು ಆದಾಯದ ಕೊರತೆಯನ್ನು ಎದುರಿಸಬೇಕಾಗುತ್ತದೆ. |