ಹಣದುಬ್ಬರ ಋಣಾತ್ಮಕತೆಯತ್ತ ಸಾಗುತ್ತಿರುವುದಕ್ಕೆ ಕಳವಳಪಡುವ ಅಗತ್ಯವಿಲ್ಲ ಎಂದು ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಆಹ್ಲುವಾಲಿಯಾ ಹೇಳಿದ್ದಾರೆ. 30 ವರ್ಷಗಳ ನಂತರ ಪ್ರಥಮ ಬಾರಿಗೆ ಮೈನಸ್ ಶೇ.1.61 ರಷ್ಟು ಕುಸಿತ ಕಂಡ ಹಣದುಬ್ಬರ , ಕೆಲ ವಾರಗಳ ಕಾಲ ಋಣಾತ್ಮಕ ವಲಯವನ್ನು ಪ್ರವೇಶಿಸುತ್ತದೆ ಎನ್ನುವುದು ನಿರೀಕ್ಷಿತವಾಗಿತ್ತು. ಆದರೆ ಹಣದುಬ್ಬರ ಕುರಿತಂತೆ ಕಳವಳಪಡುವ ಅಗತ್ಯವಿಲ್ಲ ಎಂದು ಮೊಂಟೆಕ್ ಹೇಳಿದ್ದಾರೆ. ಕಳೆದ ವರ್ಷದ ಅಗಸ್ಟ್ ತಿಂಗಳಲ್ಲಿ ಹಣದುಬ್ಬರ ದರ ಶೇ.12.9 ರಷ್ಟು ಏರಿಕೆ ಕಂಡಿತ್ತು. ಆದರೆ ಪ್ರಸಕ್ತ ಜೂನ್ ತಿಂಗಳ ಮೊದಲ ವಾರದಲ್ಲಿ ಹಣದುಬ್ಬರ ದರ ಶೇ.1.6ರಷ್ಟು ಋಣಾತ್ಮಕ ವಲಯವನ್ನು ಪ್ರವೇಶಿಸಿದ್ದರೂ ಹಣ್ಣು , ತರಕಾರಿ , ದ್ವಿದಳ ಧಾನ್ಯಗಳು ,ಖಾದ್ಯ ತೈಲ ದರಗಳು ಇನ್ನಿತರ ಅಗತ್ಯ ವಸ್ತುಗಳ ದರಗಳು ಗಗನಕ್ಕೇರಿವೆ. ಹಣದುಬ್ಬರ ದರ ಋಣಾತ್ಮಕ ವಲಯವನ್ನು ಪ್ರವೇಶಿಸಿರುವುದು ಆರ್ಥಿಕ ಬಿಕ್ಕಟ್ಟಿನ ಸಂಕೇತವಲ್ಲ. ಸಾಮಾನ್ಯ ಸ್ಥಿತಿಯತ್ತ ಸಾಗುವ ಪ್ರಕ್ರಿಯೆ. ಮೂಲ ದರಗಳನ್ನು ಆಧರಿಸಿ ಹಣದುಬ್ಬರ ದರ ಋಣಾತ್ಮಕ ವಲಯವನ್ನು ಪ್ರವೇಶಿಸಿದೆ. ಆದರೆ ಆತಂಕಪಡುವ ಅಗತ್ಯವಿಲ್ಲ ಎಂದು ಯೋಜನಾ ಆಯೋಗದ ಸದಸ್ಯೆ ಸುಮಿತ್ರಾ ಚೌಧರಿ ತಿಳಿಸಿದ್ದಾರೆ.. |