ದೇಶದ ವಿದ್ಯುತ್ ಘಟಕಗಳ ಪುನರ್‌ನವೀಕರಣ,ಆಧುನಿಕತೆ ಮತ್ತು ಪರಿಸರ ಮಾಲಿನ್ಯ, ಉತ್ಪಾದನೆ ಕಡಿತವಿರುವ ಘಟಕಗಳ ಪುನಶ್ಚೇತನಕ್ಕಾಗಿ ವಿಶ್ವಬ್ಯಾಂಕ್ 180 ಮಿಲಿಯನ್ ಡಾಲರ್‌ಗಳ ನೆರವು ನೀಡಲು ಸಮ್ಮತಿಸಿದೆ ಎಂದು ಮೂಲಗಳು ತಿಳಿಸಿವೆ.
ಕಾರ್ಬನ್ ಪ್ರಮಾಣವನ್ನು ಕಡಿಮೆ ಮಾಡಲು ಹಾಗೂ ಉತ್ಪಾದನೆಯನ್ನು ಹೆಚ್ಚಿಸಲು ವಿದ್ಯುತ್ ಘಟಕಗಳಿಗೆ ಗ್ಲೋಬಲ್ ಎನ್‌ವಿರಾನ್‌ಮೆಂಟ್ ಫೆಸಿಲಿಟಿ ಸಹೋಯಗದೊಂದಿಗೆ 45.4 ಮಿಲಿಯನ್ ಡಾಲರ್‌ಗಳ ನೆರವು ಒದಗಿಸಲಾಗುವುದು ಎಂದು ವಿಶ್ವಸಂಸ್ಥೆಯ ಹಣಕಾಸು ವಿಭಾಗ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.
ಭಾರತ ಕಳೆದ ಒಂದು ದಶಕದಿಂದ ಹಳೆಯ ವಿದ್ಯುತ್ ಉತ್ಪಾದಕ ಘಟಕಗಳನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಆರ್ಥಿಕ ಸಹಾಯಕ್ಕಾಗಿ ವಿಶ್ವಬ್ಯಾಂಕ್‌ಗೆ ಮನವಿ ಮಾಡಿತ್ತು. ಆರ್ಥಿಕ ನೆರವು ಬಿಡುಗಡೆಯಾಗಿರುವುದು ಮೊದಲ ಹೆಜ್ಜೆಯಾಗಿದೆ ಎಂದು ವಿಶ್ವ ಬ್ಯಾಂಕ್ ತಿಳಿಸಿದೆ.
ಪಶ್ಚಿಮ ಬಂಗಾಳದ ಬಂಡೆಲ್‌ನಲ್ಲಿರುವ ವಿದ್ಯುತ್ ಘಟಕ ಮಹಾರಾಷ್ಟ್ರದಲ್ಲಿರುವ ಕೊರಾಡಿ ಮತ್ತು ಹರಿಯಾಣಾದಲ್ಲಿರುವ ಪಾನಿಪತ್‌ಗಳಲ್ಲಿರುವ ತಲಾ 200-220 ಮೆಗಾವ್ಯಾಟ್ ಸಾಮರ್ಥ್ಯದ ವಿದ್ಯುತ್ ಘಟಕಗಳನ್ನು ಉನ್ನತ ದರ್ಜೆಗೇರಿಸಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. |