ಮುಂದಿನ ಪೀಳಿಗೆಗಾಗಿ ಮೊಬೈಲ್ ಕ್ಷೇತ್ರದಲ್ಲಿ ಆಧುನಿಕತೆ ತರಲಿರುವ 3ಜಿ ಸ್ಪೆಕ್ಟ್ರಂ ಹರಾಜಿಗಾಗಿ ಸರಕಾರ 4,040 ಕೋಟಿ ರೂಪಾಯಿಗಳನ್ನು ಮೀಸಲು ದರವಾಗಿ ನಿಗದಿಪಡಿಸಿದ್ದು, ಒಟ್ಟು ಹರಾಜಿನ ಮೊತ್ತ 32,320 ಕೋಟಿ ರೂಪಾಯಿಗಳಿಗೆ ತಲುಪುವ ನಿರೀಕ್ಷೆಯಿದೆ ಎಂದು ಟೆಲಿಕಾಂ ಮೂಲಗಳು ತಿಳಿಸಿವೆ.
ಕೇಂದ್ರ ವಿತ್ತ ಖಾತೆ ಸಚಿವ ಪ್ರಣಬ್‌ಮುಖರ್ಜಿಯವರೊಂದಿಗೆ ಚರ್ಚೆ ನಡೆಸಿದ ಟೆಲಿಕಾಂ ಖಾತೆ ಸಚಿವ ಎ.ರಾಜಾ, ಶುಕ್ರವಾರದಂದು ಉಭಯ ಸಚಿವರು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರನ್ನು ಭೇಟಿ ಮಾಡಿ ಮೀಸಲು ದರ ಹಾಗೂ ಶೀಘ್ರದಲ್ಲಿ ಬಿಡ್ ಆರಂಭಿಸುವ ಕುರಿತಂತೆ ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸರಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಮತ್ತು ಎಂಟಿಎನ್‌ಎಲ್‌ಗಳಿಗೆ 3ಜಿ ಸೇವೆಯನ್ನು ಆರಂಭಿಸಲು ಅನುಮತಿ ನೀಡಲಾಗುತ್ತಿದ್ದು, ಗ್ರಾಹಕರು ಹೈ ಸ್ಪೀಡ್ ಇಂಟರ್‌ನೆಟ್ ವೀಡಿಯೋ ಮತ್ತು ಇತರ ಸೌಲಭ್ಯಗಳನ್ನು ಪಡೆಯಬಹುದಾಗಿದೆ ಎಂದು ಟೆಲಿಕಾಂ ಅಧಿಕಾರಿಗಳು ತಿಳಿಸಿದ್ದಾರೆ..
ಕಳೆದ ವಾರ ಟೆಲಿಕಾಂ ಖಾತೆ ಸಚಿವ ಎ.ರಾಜಾ ವಿತ್ತ ಸಚಿವ ಪ್ರಣಬ್ ಮುಖರ್ಜಿಯವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಟೆಲಿಕಾಂ ಇಲಾಖೆಯ ಹಿರಿಯ ಅಧಿಕಾರಿಗಳು 2,020 ಕೋಟಿ ರೂಪಾಯಿಗಳ ಮೀಸಲು ದರವನ್ನು ದ್ವಿಗುಣಗೊಳಿಸುವುಂತೆ ಸಲಹೆ ನೀಡಿದ ಹಿನ್ನೆಲೆಯಲ್ಲಿ ಉಭಯ ಸಚಿವರು ಚರ್ಚಿಸಿ ಮೀಸಲು ದರ ಹೆಚ್ಚಳಕ್ಕೆ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಟೆಲಿಕಾಂ ಮೂಲಗಳು ತಿಳಿಸಿವೆ. |