ಹೊರಗುತ್ತಿಗೆ ಸೇವೆ ಒದಗಿಸುವ ವಂಚನೆ ಪೀಡಿತ ಸತ್ಯಂ ಕಂಪ್ಯೂಟರ್ಸ್ ಸರ್ವಿಸಸ್ ಲಿಮಿಟೆಡ್ ಕಂಪೆನಿಯನ್ನು ಮಹೀಂದ್ರಾ ಸತ್ಯಂ ಎಂದು ಮರುನಾಮಕರಣ ಮಾಡಲಾಗಿದೆ. ಸತ್ಯಂ ಕಂಪ್ಯೂಟರ್ಸ್ ಸರ್ವಿಸಸ್, ಕೆಲ ವರ್ಷಗಳ ಹಿಂದೆ ದೇಶದ ನಾಲ್ಕನೆ ಬೃಹತ್ ಹೊರಗುತ್ತಿಗೆ ಸೇವೆಯನ್ನು ನೀಡುವ ಕಂಪೆನಿಯಾಗಿ ಹೊರಹೊಮ್ಮಿತ್ತು. ಆದರೆ ಜನೆವರಿಯಲ್ಲಿ ಸಂಸ್ಥಾಪಕ ರಾಮಲಿಂಗಾರಾಜು ಬ್ಯಾಂಕ್ ಖಾತೆಗಳ ದಾಖಲೆಗಳನ್ನು ತಿರುಚಿರುವುದನ್ನು ಒಪ್ಪಿಕೊಂಡ ನಂತರ ಹೂಡಿಕೆದಾರರು ಆಘಾತಕ್ಕೆ ಒಳಗಾಗಿದ್ದರು.ವಾಹನೋದ್ಯಮ ಕ್ಷೇತ್ರದಲ್ಲಿ ಖ್ಯಾತಿ ಪಡೆದ ಮಹೀಂದ್ರಾ ಆಂಡ್ ಮಹೀಂದ್ರಾ ಸಂಸ್ಥೆಯ ಟೆಕ್ ಮಹೀಂದ್ರಾ ಮತ್ತು ಬ್ರಿಟನ್‌ನ ಬಿ.ಟಿ ಗ್ರೂಪ್ ಸಂಸ್ಥೆಗಳು ಏಪ್ರಿಲ್ ತಿಂಗಳಲ್ಲಿ ನಡೆದ ಸತ್ಯಂ ಹರಾಜಿನಲ್ಲಿ ಶೇರುಗಳನ್ನು ಖರೀದಿಸಿ ತಮ್ಮ ಸ್ವಾಧೀನಕ್ಕೆ ತೆಗೆದುಕೊಂಡಿದ್ದವು. ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಕಾರ್ಯನಿರ್ವಾಹಕ ಉಪಾಧ್ಯಕ್ಷ ವೀನಿತ್ ನಯ್ಯರ್, ನೂತನ ಅಡಳಿತ ಮಂಡಳಿ ಹೊಸ ಮೌಲ್ಯಗಳನ್ನು ಅಳವಡಿಸಿಕೊಳ್ಳಲಿದ್ದು, ಗ್ರಾಹಕರಿಗೆ ಪ್ರಥಮ ಆದ್ಯತೆ ಮೇರೆಗೆ ಸೇವೆಯನ್ನು ಒದಗಿಸಲಿದೆ. ನೂತನ ಬ್ರಾಂಡ್ ಮಹೀಂದ್ರಾ ಸತ್ಯಂ ಹೊರುಗುತ್ತಿಗೆ ಸೇವೆಯಲ್ಲಿ ಹೊಸ ಅಧ್ಯಾಯ ಸೃಷ್ಟಿಸುವ ನಿರೀಕ್ಷೆಯನ್ನು ಹೊಂದಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. |