ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಏರಿಕೆಯ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಪೆಟ್ರೋಲ್‌ಗೆ 2 ರೂಪಾಯಿ ,ಡೀಸೆಲ್‌ಗೆ 1 ರೂಪಾಯಿ ದರ ಹೆಚ್ಚಳ ಮಾಡುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.ಸರಕಾರಿ ಸ್ವಾಮ್ಯದ ತೈಲ ಕಂಪೆನಿಗಳಾದ ಇಂಡಿಯನ್ ಆಯಿಲ್ ,ಹಿಂದೂಸ್ತಾನ್ ಪೆಟ್ರೋಲಿಯಂ ಮತ್ತು ಭಾರತ ಪೆಟ್ರೋಲಿಯಂ ಕಂಪೆನಿಗಳು, ಪೆಟ್ರೋಲ್ , ಡೀಸೆಲ್,ಎಲ್‌ಪಿಜಿ ಮತ್ತು ಸೀಮೆಎಣ್ಣೆ ಮಾರಾಟದಲ್ಲಿ ಪ್ರತಿ ದಿನ 135 ಕೋಟಿ ರೂಪಾಯಿಗಳ ನಷ್ಟ ಅನುಭವಿಸುತ್ತಿದ್ದು ವಾರ್ಷಿಕವಾಗಿ 38,700 ಕೋಟಿ ರೂಪಾಯಿಗಳ ನಷ್ಟ ಎದುರಿಸುತ್ತಿವೆ. ಕಚ್ಚಾ ತೈಲ ದರ ಅಮುದು ವಹಿವಾಟಿನಲ್ಲಿ ಮೇ ತಿಂಗಳ ಅವಧಿಯಲ್ಲಿ ಪ್ರತಿ ಬ್ಯಾರೆಲ್‌ಗೆ 58 ಡಾಲರ್‌ಗಳಿದ್ದ ದರ ಜೂನ್ ತಿಂಗಳ ಅವಧಿಯಲ್ಲಿ ಪ್ರತಿ ಬ್ಯಾರೆಲ್‌ಗೆ 70.49 ಡಾಲರ್‌ಗಳಿಗೆ ಏರಿಕೆಯಾಗಿರುವುದು ಎಚ್ಚರಿಕೆಯ ಗಂಟೆಯನ್ನು ಬಾರಿಸಿದೆ ಎಂದು ಪೆಟ್ರೋಲಿಯಂ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಸರಕಾರಿ ಸ್ವಾಮ್ಯದ ತೈಲ ಕಂಪೆನಿಗಳನ್ನು ನಷ್ಟದಿಂದ ಹೊರತರುವುದು ಅಗತ್ಯವಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಏರಿಕೆ ಕಾಣುತ್ತಿರುವ ಕಚ್ಚಾ ತೈಲ ದರವನ್ನು ತೈಲ ಕಂಪೆನಿಗಳು ಸರಕಾರ ಹಾಗೂ ಗ್ರಾಹಕರ ನಡುವೆ ಸಮನಾಗಿ ಹಂಚಬೇಕಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ತೈಲ ಕಂಪೆನಿಗಳು ಪ್ರತಿ ಲೀಟರ್ ಡೀಸೆಲ್‌ಗೆ 2.96 ರೂಪಾಯಿ ಹಾಗೂ ಪ್ರತಿ ಲೀಟರ್ ಪೆಟ್ರೋಲ್‌ಗೆ 6.08 ರೂಪಾಯಿಗಳ ನಷ್ಟವನ್ನು ಎದುರಿಸುತ್ತಿವೆ. ಆದ್ದರಿಂದ ಪ್ರತಿ ಲೀಟರ್ ಡೀಸೆಲ್‌ಗೆ 1 ರೂಪಾಯಿ, ಪೆಟ್ರೋಲ್‌ಗೆ 2 ರೂಪಾಯಿ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸಲಾಗುವುದು ಎಂದು ತಿಳಿಸಿದ್ದಾರೆ.ದರ ಏರಿಕೆಯ ನಂತರವೂ ಉಳಿದ ನಷ್ಟವನ್ನು ರೇಟೆಲ್ ವಹಿವಾಟುದಾರರಿಗೆ ಸರಕಾರಿ ತೈಲ ಬಾಂಡ್‌ಗಳನ್ನು ಬಿಡುಗಡೆ ಮಾಡುವ ಮೂಲಕ ಮತ್ತು ಒಎನ್‌ಜಿಸಿಯಂತಹ ಕಂಪೆನಿಗಳೊಂದಿಗೆ ಅನುದಾನ ಹಂಚಿಕೊಳ್ಳುವ ಮೂಲಕ ಭರ್ತಿ ಮಾಡಲಾಗುವುದು ಎಂದು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.ವಿತ್ತ ಸಚಿವ ಪ್ರಣಬ್ ಮುಖರ್ಜಿ, ಬಜೆಟ್‌ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ಗಳ ಮೇಲೆ ಅಬಕಾರಿ ತೆರಿಗೆಯಲ್ಲಿ 2ರೂಪಾಯಿ ಕಡಿತಗೊಳಿಸಿದಲ್ಲಿ ಗ್ರಾಹಕರಿಗೆ ದರ ಏರಿಕೆ ಹೊರೆಯಾಗುವುದಿಲ್ಲ. ಪೆಟ್ರೋಲ್‌ಗೆ 11.35 ರೂ. ಡೀಸೆಲ್‌ಗೆ 1.60 ರೂಪಾಯಿ ಅಬಕಾರಿ ತೆರಿಗೆಯನ್ನು ಸರಕಾರ ವಿಧಿಸುತ್ತಿದೆ. ಅದನ್ನು ಹೊರತುಪಡಿಸಿ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟಕ್ಕೆ 2 ರೂಪಾಯಿಗಳ ರಸ್ತೆ ತೆರಿಗೆಯನ್ನು ಪಾವತಿಸಬೇಕಾಗುತ್ತದೆ ಎಂದು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. |