ಸರಕಾರಿ ಸ್ವಾಮ್ಯದ ಏರ್‌ಇಂಡಿಯಾ ಆರ್ಥಿಕ ಬಿಕ್ಕಟ್ಟಿನಿಂದ ಬಳಲುತ್ತಿದ್ದು, ಉದ್ಯೋಗಿಗಳ ವೆಚ್ಚವನ್ನು ವಾರ್ಷಿಕವಾಗಿ 5 ಬಿಲಿಯನ್ ಡಾಲರ್‌ಗಳಷ್ಟು ಕಡಿತಗೊಳಿಸಲು ನಿರ್ಧರಿಸಿದೆ ಎಂದು ಏರ್‌ಇಂಡಿಯಾ ಅಧಿಕಾರಿಗಳು ತಿಳಿಸಿದ್ದಾರೆ.ಪ್ರಸ್ತುತ ಏರ್‌ಇಂಡಿಯಾ ಉದ್ಯೋಗಿಗಳ ವೆಚ್ಚ ವಾರ್ಷಿಕವಾಗಿ 30 ಬಿಲಿಯನ್ ರೂಪಾಯಿಗಳಾಗಿವೆ ಎಂದು ಮೂಲಗಳು ತಿಳಿಸಿವೆ.ಉದ್ಯೋಗಿಗಳ ವೇತನದಲ್ಲಿ ಕಡಿತ ಮಾಡುವುದಲ್ಲದೆ ಉದ್ಯೋಗಿಗಳ ಕಾರ್ಯವೈಖರಿಯಲ್ಲಿ ಮತ್ತಷ್ಟು ಬದಲಾವಣೆಗಳನ್ನು ತರಲು ಉದ್ದೇಶಿಸಿದ್ದು, ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕುವುದಾಗಿ ಏರ್‌ಇಂಡಿಯಾ ತಿಳಿಸಿದೆ. ಸಂಸ್ಥೆಯ ಉದ್ಯೋಗಿಗಳನ್ನು ವಜಾಗೊಳಿಸದೆ ಹಾರಾಟ ಭತ್ಯೆ , ಇತರ ಭತ್ಯೆಗಳು ಸೇರಿದಂತೆ ವೇತನ ಒಪ್ಪಂದವನ್ನು ಪರಿಷ್ಕರಿಸಲು ನಾಲ್ಕು ಮಂದಿ ಅಧಿಕಾರಿಗಳ ಸಮಿತಿಯನ್ನು ರಚಿಸಿದೆ. ಸಮಿತಿ ಮುಂಬರುವ ಜುಲೈ 15 ರಂದು ವರದಿಯನ್ನು ಸಲ್ಲಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಏರ್‌ಇಂಡಿಯಾ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಅರವಿಂದ್ ಜಾಧವ್ , ಹಿರಿಯ ಉದ್ಯೋಗಿಗಳು ಜುಲೈ ತಿಂಗಳ ವೇತನ ಮತ್ತು ಭತ್ಯೆಗಳನ್ನು ಸಂಸ್ಥೆಗೆ ಬಿಟ್ಟುಕೊಂಡುವಂತೆ ಮನವಿ ಮಾಡಿದ್ದಾರೆ. ಆರ್ಥಿಕ ಕುಸಿತದಿಂದ ಬಳಲುತ್ತಿರುವ ಏರ್‌ಇಂಡಿಯಾ,ಸರಕಾರಕ್ಕೆ ಶೇರುಗಳ ಮೂಲಕ ಅಥವಾ ಧೀರ್ಘಾವಧಿ ಸಾಲ ಒದಗಿಸುವಂತೆ ಮನವಿ ಮಾಡಿದೆ. ಭಾರತದ ನಾಗರಿಕ ವಿಮಾನಯಾನ ಉದ್ಯಮ ಇಂಧನ ದರ ಏರಿಕೆ ಹಾಗೂ ಜಾಗತಿಕ ಆರ್ಥಿಕ ಕುಸಿತದಿಂದಾಗಿ ಕುಸಿದ ಬೇಡಿಕೆಯಿಂದಾಗಿ ಪ್ರಸಕ್ತ ವರ್ಷದಲ್ಲಿ 2ಬಿಲಿಯನ್ ಡಾಲರ್ ನಷ್ಟ ಅನುಭವಿಸಿದೆ ಎಂದು ಏರ್‌ಇಂಡಿಯಾ ಮೂಲಗಳು ತಿಳಿಸಿವೆ. |