ಬಟ್ಟೆ ಒಗೆಯುವಾಗ ನೀರಿನ ಸಂರಕ್ಷಣೆ ಮಾಡುವುದು ಸಾಮಾನ್ಯವಾಗಿ ಅಸಾಧ್ಯ. ಆದರೆ ಆ ಮಾತನ್ನು ಸುಳ್ಳಾಗಿಸುವ ದಿನಗಳು ದೂರವಿಲ್ಲ. ಮುಂದಿನ ವರ್ಷ ಮಾರುಕಟ್ಟೆಗೆ ಬರಲಿರುವ ಪರಿಸರ ಸ್ನೇಹಿ ವಿನೂತನ ವಾಷಿಂಗ್ ಮೆಷಿನ್‌ಗೆ ಕೇವಲ ಒಂದು ಕಪ್ ನೀರಿದ್ದರೆ ಸಾಕಂತೆ.
ಲೀಡ್ಸ್ ಯುನಿವರ್ಸಿಟಿಯಲ್ಲಿ ಅಭಿವೃದ್ಧಿಪಡಿಸಲಾಗಿರುವ ಈ ತಂತ್ರಜ್ಞಾನದ ವಾಷಿಂಗ್ ಮೆಷಿನ್ ಶೇಕಡಾ 90ರಷ್ಟು ನೀರನ್ನು ಉಳಿಸುತ್ತದೆ. ಅಷ್ಟು ಮಾತ್ರವಲ್ಲ ವಿದ್ಯುತ್ ಬಳಕೆಯಲ್ಲೂ ಇದು ಇತರ ಯಂತ್ರಗಳಿಗಿಂತ ಶೇಕಡಾ 30ರಷ್ಟು ಕಡಿಮೆ ಪ್ರಮಾಣವನ್ನಷ್ಟೇ ಬಳಸಿಕೊಳ್ಳುತ್ತದೆ. ಇಲ್ಲಿ ಮಾರ್ಜಕಗಳ ಬಳಕೆಯೂ ತೀರಾ ಕಡಿಮೆಯೆನ್ನುವುದು ಗಮನಾರ್ಹ.
ಇಲ್ಲಿ ಬಟ್ಟೆ ಒಗೆಯುವ ಕೆಲಸವನ್ನು ಯಂತ್ರದೊಳಗೆ ಅಳವಡಿಸಲಾಗಿರುವ ಚಿಕ್ಕ ಚಿಕ್ಕ ಪ್ಲಾಸ್ಟಿಕ್ ತುಣುಕುಗಳು ಮಾಡುತ್ತವೆ. ಅವು ಬಟ್ಟೆಯಲ್ಲಿನ ಕೊಳೆಯನ್ನು ಹೀರಿಕೊಂಡು ಶುದ್ಧೀಕರಣ ಕಾರ್ಯವನ್ನು ನಿರ್ವಹಿಸುತ್ತವೆ.
ತನ್ನ ಆವರ್ತನ ಪ್ರಕ್ರಿಯೆನ್ನು ಮುಗಿಸಿದ ನಂತರ ಈ ಪ್ಲಾಸ್ಟಿಕ್ ತುಂಡುಗಳು ಯಂತ್ರದ ತಳ ಭಾಗದಲ್ಲಿರುವ ಡ್ರಮ್‌ಗೆ ಹೋಗಿ ಬೀಳುತ್ತವೆ. ಅವುಗಳನ್ನು ಹೆಚ್ಚುಕಡಿಮೆ ನೂರು ಬಾರಿ ಉಪಯೋಗಿಸಬಹುದು ಎನ್ನುವುದು ತಜ್ಞರ ಅಭಿಪ್ರಾಯ.
ಈ ತಂತ್ರಜ್ಞಾನದ ಹಿಂದೆ 'ಕ್ಸೆರೋಸ್' ಎನ್ನುವ ಸಂಸ್ಥೆಯು ಹೆಚ್ಚಿನ ಶ್ರಮವಹಿಸಿದೆ. ಅದರ ಉದ್ದೇಶ ವ್ಯವಹಾರಿಕ ಮಾರುಕಟ್ಟೆಯಲ್ಲಿ ಈ ಯಂತ್ರಗಳನ್ನು ಪರಿಚಯಿಸುವುದು. ವಾಷಿಂಗ್ ಮಾರ್ಕೆಟ್, ಹೊಟೇಲುಗಳು ಮತ್ತು ಡ್ರೈ ಕ್ಲೀನರ್‌ಗಳಲ್ಲಿ ವ್ಯಾಪಕ ಬಳಕೆಗೆ ಉತ್ತೇಜಿಸುವ ನಿಟ್ಟಿನಲ್ಲಿ ಕಂಪನಿ ಈಗ ಕಾರ್ಯೋನ್ಮುಖವಾಗಿದೆ.
ಕಳೆದ 30 ವರ್ಷಗಳಿಂದ ಈ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸುವಲ್ಲಿ ಅವಿರತ ಶ್ರಮವಹಿಸಿರುವ ಲೀಡ್ಸ್‌ನ ಸ್ಟೀಫನ್ ಬರ್ಕಿನ್‌ಶಾರವರು ಮಾತನಾಡುತ್ತಾ, "ಈ ಯಂತ್ರವು ಕಾಫಿ ಮತ್ತು ಲಿಪ್‌ಸ್ಟಿಕ್ ಸೇರಿದಂತೆ ಎಲ್ಲಾ ರೀತಿಯ ಕೊಳೆಗಳನ್ನು ಬಟ್ಟೆಯಿಂದ ತೆಗೆದುಹಾಕುವ ಸಾಮರ್ಥ್ಯ ಹೊಂದಿದೆ ಎಂಬುದನ್ನು ನಾವು ತೋರಿಸಿಕೊಟ್ಟಿದ್ದೇವೆ. ಇದಕ್ಕೆ ಬೇಕಾಗಿರುವುದು ತೀರಾ ಕಡಿಮೆ ನೀರು ಎನ್ನವುದು ನಮ್ಮ ಹೆಚ್ಚುಗಾರಿಕೆ" ಎಂದು ತಿಳಿಸಿದ್ದಾರೆ.
ಸುಮಾರು 20 ಕೆ.ಜಿ.ಗಳಷ್ಟು ಬೀಡ್ಸ್‌ಗಳನ್ನು ನೀರು ಮತ್ತು ಮಾರ್ಜಕಗಳೊಂದಿಗೆ ಯಂತ್ರಕ್ಕೆ ತುಂಬಿಸಬೇಕು. ಪ್ಲಾಸ್ಟಿಕ್ ಚಿಪ್ಸ್‌ಗಳನ್ನು ನೂರು ಬಾರಿ ಮರುಬಳಕೆ ಮಾಡಬಹುದಾಗಿದ್ದು, ಇದು ಆರು ತಿಂಗಳ ಕಾಲ ಸಾಮಾನ್ಯ ಬಟ್ಟೆ ಒಗೆಯಲು ಬಳಸಬಹುದಾಗಿದೆ.
|