ರೈಸ್ ಫಿಶ್ ಕರಿ ಊಟ ಮತ್ತು ವೆಜಿಟೇಬಲ್ ಬಿರಿಯಾನಿಯನ್ನು ಪ್ರಮುಖ ರೈಲ್ವೇ ನಿಲ್ದಾಣಗಳಲ್ಲಿ ಪರಿಚಯಿಸಿ ಮಿತ ಬೆಲೆಗೆ ದೊರಕುವಂತೆ ಮಾಡುವ ಮೂಲಕ ಗುಣಮಟ್ಟದ ಆಹಾರ ಪೂರೈಸುವತ್ತ ರೈಲ್ವೇ ಇಲಾಖೆ ಗಮನ ಹರಿಸಿದೆ.
ಪ್ರಮುಖ ರೈಲ್ವೇ ನಿಲ್ದಾಣಗಳಲ್ಲಿ ಕೋಂಬೋ ಮೀಲ್ಸ್, ಅನ್ನ ಮತ್ತು ಮೀನು ಸಾರು, ಚೋಲೆ ಭಾತುರಾ, ವೆಜಿಟೇಬಲ್ ಬಿರಿಯಾನಿ ಮತ್ತು ಪರೋಟಾ ಆಮ್ಲೆಟ್‌ಗಳನ್ನು ಪರಿಚಯಿಸುವ ಬಗ್ಗೆ ಶೀಘ್ರದಲ್ಲೇ ಅಂತಿಮ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತದೆ.
"ಪ್ರತಿ ಪ್ಲೇಟ್‌ಗೆ 20 ರೂಪಾಯಿಗಳೆಂದು ತಾತ್ಕಾಲಿಕ ಬೆಲೆ ನಿಗದಿಪಡಿಸುವ ಬಗ್ಗೆ ಯೋಚನೆಗಳಿವೆ" ಎಂದು ರೈಲ್ವೇ ಇಲಾಖೆಯ ಮೂಲವೊಂದು ತಿಳಿಸಿದ್ದು, ಕೆಲದಿನಗಳಲ್ಲಿ ಅಂತಿಮ ಬೆಲೆಯನ್ನು ಪ್ರಕಟಿಸುವ ನಿರ್ಧಾರ ಕೈಗೊಳ್ಳಲಾಗುತ್ತದೆ.
ರೈಲುಗಳಲ್ಲಿ ಮತ್ತು ನಿಲ್ದಾಣಗಳಲ್ಲಿ ಅತ್ಯುತ್ತಮ ಆಹಾರ ಪದಾರ್ಥಗಳನ್ನು ನೀಡಲು ವಿಫಲವಾಗಿರುವ ಬಗ್ಗೆ ರೈಲ್ವೇ ಇಲಾಖೆಗೆ ಸಾಕಷ್ಟು ದೂರುಗಳು ಕೂಡ ಬಂದಿವೆ. ಲಭ್ಯವಿರುವ ಆಹಾರ ಪದಾರ್ಥದ ಗುಣಮಟ್ಟ ಉತ್ತಮವಾಗಿಲ್ಲವೆಂಬುದೇ ಪ್ರಮುಖ ಸಮಸ್ಯೆ.
ಇದೀಗ ಹೊಸ ಯೋಜನೆಯನ್ನು ರೂಪಿಸುತ್ತಿರುವ ಇಲಾಖೆ, ರೈಲ್ವೇ ಪ್ಲಾಟ್‌ಫಾರಂಗಳಲ್ಲಿ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಅಂಗಡಿಗಳ ಮುಂದೆ ಆಹಾರ ಪದಾರ್ಥಗಳ ಪಟ್ಟಿ ಮತ್ತು ಬೆಲೆಗಳನ್ನು ನಮೂದಿಸಿರುವ ಬೋರ್ಡುಗಳನ್ನು ಹಾಕಲಿದೆ ಎಂದು ಮೂಲವೊಂದು ತಿಳಿಸಿದೆ.
ಅದೇ ಹೊತ್ತಿಗೆ ಆಹಾರ ತಯಾರಿಕೆಯ ನಿಯಮಗಳನ್ನು ಬದಲಾಯಿಸಬೇಕು ಎಂದು ಐಆರ್‌ಸಿಟಿಸಿ ರೈಲ್ವೇ ಮಂಡಳಿಗೆ ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ತಿಳಿಸಿದೆ.
ಇದೀಗ ಸಲ್ಲಿಸಿರುವ ಪ್ರಸ್ತಾವನೆಯ ನೂತನ ಆಹಾರ ತಯಾರಿಕಾ ನೀತಿ ಪ್ರಕಾರ ಖ್ಯಾತ ಕಂಪನಿಗಳಾದ ಹಲ್ದೀರಾಮ್, ಬಿಕಾನೆರ್ವಾಲ, ನಿರೂಲಾಸ್ ಸೇರಿದಂತೆ ಇತರರು ರೈಲ್ವೇ ಬಿಡ್ಡಿಂಗ್‌ನಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕು ಎನ್ನುವುದು ಪ್ರಮುಖಾಂಶ.
ಪ್ರಸಕ್ತ ರೈಲ್ವೇ ಹೊಂದಿರುವ ನಿಯಮಾವಳಿಗಳು ಬ್ರಾಂಡೆಡ್ ಸಂಸ್ಥೆಗಳು ರೈಲ್ವೇ ಉಪಹಾರ ತಯಾರಿಕಾ ಬಿಡ್ಡಿಂಗ್‌ನಲ್ಲಿ ಪಾಲ್ಗೊಳ್ಳಲು ಪೂರಕವಾಗಿಲ್ಲ.
ಹಲವು ನಿಲ್ದಾಣಗಳಲ್ಲಿ ಕೇವಲ 10 ರೂಪಾಯಿಗೆ 'ಪೂರಿ ಸಾಬ್ಜಿ'ಯನ್ನು 'ಜನತಾ ಮೀಲ್' ಎಂದು ಸರಬರಾಜು ಮಾಡಲು ರೈಲ್ವೇ ಇಲಾಖೆಯು ಈಗಾಗಲೇ ನಿರ್ಧಾರ ಕೈಗೊಂಡಿದೆ ಎಂದು ಇಲಾಖೆಯ ತಿಳಿಸಿದೆ.
|