ದೇಶದ ಅತಿ ದೊಡ್ಡ ಕಾರು ತಯಾರಿಕಾ ಸಂಸ್ಥೆ ಮಾರುತಿ ಸುಜುಕಿ ಎಲ್‌ಪಿಜಿ ಮಾದರಿಯ ಕಾರು ಉತ್ಪಾದನೆಯನ್ನು ಸ್ಥಗಿತಗೊಳಿಸಿದ್ದು, ಸಿಎನ್‌ಜಿ ಮಾದರಿಗಳಿಗೆ ರೂಪಾಂತರ ಹೊಂದಲಿದೆ. 2010ರಲ್ಲಿ ಈ ಕಾರುಗಳನ್ನು ಮಾರುಕಟ್ಟೆಗೆ ಕಂಪನಿ ಬಿಡುಗಡೆ ಮಾಡಲಿದ್ದು, ಅತೀ ಬೇಡಿಕೆಯ ಆಲ್ಟೋ ಕಾರನ್ನೇ ಮೊದಲು ರಸ್ತೆಗಿಳಿಸುವ ಸಾಧ್ಯತೆಗಳಿವೆ.
"ಗ್ರಾಹಕರು ಸಿಎನ್‌ಜಿ ಕಾರುಗಳಿಗೆ ಹೆಚ್ಚು ಒಲವು ತೋರಿಸುತ್ತಿರುವ ಕಾರಣ ನಾವು ಎಲ್‌ಪಿಜಿ ಮಾದರಿಯ ಉತ್ಪಾದನೆಯನ್ನು ನಿಲ್ಲಿಸಿದ್ದೇವೆ. ಮುಂದಿನ ವರ್ಷ ನಾವು ಸಿಎನ್‌ಜಿ ಮಾದರಿಯನ್ನು ಹೊರತರಲಿದ್ದೇವೆ" ಎಂದು ಮಾರುತಿ ಸುಜುಕಿಯ ಭಾರತೀಯ ಆವೃತ್ತಿಯ ಅಧ್ಯಕ್ಷ ಆರ್.ಸಿ. ಭಾರ್ಗವ ತಿಳಿಸಿದ್ದಾರೆ.
ದೇಶದ ಪ್ರಮುಖ ನಗರಗಳಲ್ಲಿ 'ಕ್ಲೀನರ್-ಫುಯೆಲ್' ಕಾರುಗಳನ್ನು ಪರಿಚಯಿಸುವ ಸಂದರ್ಭದಲ್ಲಿ ನಮ್ಮ ವಿತರಣಾ ಜಾಲವನ್ನು ಇನ್ನಷ್ಟು ಬಿಗಿಗೊಳಿಸಲಿದ್ದೇವೆ ಎಂದೂ ಅವರು ಮಾಹಿತಿ ನೀಡಿದರು.
"ವಿತರಣಾ ಜಾಲದಲ್ಲಿನ ಕೊರತೆಯಿಂದಾಗಿ ನಮ್ಮ ಗ್ರಾಹಕರು ದೊಡ್ಡ ಸರದಿ ಸಾಲಿನಲ್ಲಿ ಕಾಯುವುದನ್ನು ನಾವು ಬಯಸುವುದಿಲ್ಲ. 2010ರೊಳಗೆ ನಮ್ಮ ಹಂಚಿಕೆದಾರರ ನೆಟ್‌ವರ್ಕ್ ಬಲಪಡಿಸುವ ಭರವಸೆ ನಮಗಿದೆ. ಆ ಹೊತ್ತಿನಲ್ಲಿ ನಾವು ಸಿಎನ್‌ಜಿ ಕಾರುಗಳನ್ನು ಮಾರುಕಟ್ಟೆಗೆ ಬಿಡಲಿದ್ದೇವೆ" ಎಂದು ಭಾರ್ಗವ ತಿಳಿಸಿದ್ದಾರೆ.
ಸಿಎನ್‌ಜಿ ಮಾದರಿಯಲ್ಲಿ ಮೊದಲು ರಸ್ತೆಗಿಳಿಯುವ ವಾಹನ ಯಾವುದು ಎಂಬುದನ್ನು ಅವರು ಬಹಿರಂಗಪಡಿಸಲು ಇದೇ ಸಂದರ್ಭದಲ್ಲಿ ನಿರಾಕರಿಸಿದ್ದಾರೆ.
ಆದರೆ ಮೂಲಗಳ ಪ್ರಕಾರ 2010ರ ವೇಳೆಗೆ ಸಿಎನ್‌ಜಿ ಆವೃತ್ತಿಯು ಆಲ್ಟೋ ಕಾರಿನ ಎಂಎಸ್ಐ ಮಾದರಿಯಲ್ಲಿ ಬಿಡುಗಡೆಯಾಗುತ್ತದೆ.
"ಆಲ್ಟೋ ಕಾರು ಮಾರುತಿ ಸುಜುಕಿ ಕಂಪನಿಯಿಂದ ಅತೀ ಹೆಚ್ಚು ಬಿಕರಿಯಾಗುತ್ತಿರುವ ವಾಹನ. ಹಾಗಾಗಿ ಅದೇ ಕಾರನ್ನು ಹೊಸ ಮಾದರಿಯಲ್ಲಿ ಕಂಪನಿಯು ಬಿಡುಗಡೆ ಮಾಡಬಹುದು" ಎಂದು ಮೂಲವೊಂದು ಅಂದಾಜಿಸಿದೆ.
ಎಲ್‌ಪಿಜಿ (ಲಿಕ್ವಿಫೈಡ್ ಪೆಟ್ರೋಲಿಯಂ ಗ್ಯಾಸ್) ಮಾದರಿಗಿಂತಲೂ ಕಡಿಮೆ ಬೆಲೆ ಮತ್ತು ಪರಿಸರ ಸ್ನೇಹಿ ಸಿಎನ್‌ಜಿ (ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್)ಯೆಂದು ಹೇಳಲಾಗುತ್ತದೆ.
|