'ಮಹೀಂದ್ರಾ ಸತ್ಯಂ'ನ ಕಾರ್ಯನಿರ್ವಾಹಕಾಧಿಕಾರಿಯಾಗಿ ಸಿ.ಪಿ. ಗುರ್ನಾನಿ ಹಾಗೂ ಮುಖ್ಯ ಹಣಕಾಸು ಅಧಿಕಾರಿಯನ್ನಾಗಿ ಎಸ್. ದುರ್ಗಾಶಂಕರ್‌ರನ್ನು 'ಟೆಕ್ ಮಹೀಂದ್ರಾ' ತಕ್ಷಣದಿಂದಲೇ ಜಾರಿಗೆ ಬರುವಂತೆ ನೇಮಕಗೊಳಿಸಿ ಆದೇಶ ಹೊರಡಿಸಿದೆ.
ಬಹುಕೋಟಿ ಹಗರಣದಿಂದ ತತ್ತರಿಸಿದ್ದ ಸತ್ಯಂ ಕಂಪ್ಯೂಟರ್ಸ್‌ಗೆ ಸರಕಾರದಿಂದ ರಚಿತಗೊಂಡಿದ್ದ ಮಂಡಳಿಯಿಂದ ನೇಮಕಗೊಂಡಿದ್ದ ಎ.ಎಸ್. ಮೂರ್ತಿಯವರ ಜಾಗಕ್ಕೆ ಗುರ್ನಾನಿಯವರು ಆಯ್ಕೆಗೊಂಡಿದ್ದಾರೆ. ಗುರ್ನಾನಿಯವರು ಟೆಕ್ ಮಹೀಂದ್ರಾದ ಜಾಗತಿಕ ವ್ಯವಹಾರಗಳ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದರು.
'ಮಹೀಂದ್ರಾ ಸತ್ಯಂ'ನ ನೂತನ ಮುಖ್ಯ ಹಣಕಾಸು ಅಧಿಕಾರಿ ದುರ್ಗಾಶಂಕರ್‌ರವರು ಈ ಹಿಂದೆ ಮಹೀಂದ್ರಾ ಗ್ರೂಪ್‌ನ ಹಿರಿಯ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.
ಬಹುಕೋಟಿ ಹಗರಣಕ್ಕೆ ಸಿಲುಕಿದ್ದ ಸತ್ಯಂನ ಪ್ರಧಾನ ಹಣಕಾಸು ಅಧಿಕಾರಿ ವಡ್ಲಮಣಿ ಶ್ರೀನಿವಾಸ್ ಬಂಧನಕ್ಕೊಳಗಾದ ನಂತರ ಮಹೀಂದ್ರಾ ಒಡೆತನದಲ್ಲಿಯೂ ಆ ಹುದ್ದೆ ಖಾಲಿಯಾಗಿತ್ತು. ಇದೀಗ ದುರ್ಗಾಶಂಕರ್‌ರನ್ನು ಆ ಸ್ಥಾನಕ್ಕೆ ನೇಮಕಗೊಳಿಸಲಾಗಿದೆ.
ಟೆಲಿಕಾಮ್ ತಂತ್ರಜ್ಞಾನ ವಲಯದಲ್ಲಿ ಸತ್ಯಂ ತನ್ನ ಪಾರಮ್ಯತೆ ಮೆರೆದಿತ್ತು. ಆದರೆ ಈಗಲೂ ಅದರಲ್ಲಿ ಬೃಹತ್ ಮಟ್ಟಕ್ಕೆ ಬೆಳೆಯುವ ಸಾಮರ್ಥ್ಯವಿದೆ. ಟೆಲಿಕಾಮ್ ತಂತ್ರಜ್ಞಾನ ವಲಯದ ಮುಂದಿನ ದಾರಿಗಳ ಬಗ್ಗೆ ಗುರ್‌ನಾನಿಯವರು ಜವಾಬ್ದಾರರಾಗಿರುತ್ತಾರೆ ಎಂದು ನೇಮಕದ ನಂತರ ಮಾತನಾಡಿದ ಮಹೀಂದ್ರಾ ಸತ್ಯಂನ ಕಾರ್ಯನಿರ್ವಾಹಕ ಉಪಾಧ್ಯಕ್ಷ ವಿನೀತ್ ನಯ್ಯರ್ ತಿಳಿಸಿದ್ದಾರೆ.
ಅದೇ ಹೊತ್ತಿಗೆ ಟೆಕ್ ಮಹೀಂದ್ರಾದ ತಂತ್ರಗಾರಿಕಾ ಕರ್ತೃ ಸಂಜಯ್ ಕಾರ್ಲಾರವರನ್ನು ಕಂಪನಿಯ ನೂತನ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಹುದ್ದೆಗೆ ಭಡ್ತಿ ನೀಡಲಾಗಿದೆ.
ಟೆಕ್ ಮಹೀಂದ್ರಾ 1,700 ಕೋಟಿ ರೂಪಾಯಿಗಳ ಹೂಡಿಕೆ ಮಾಡುವ ಮೂಲಕ ಸತ್ಯಂನಲ್ಲಿ ಶೇಕಡಾ 31ರಷ್ಟನ್ನು ಪಾಲು ಹೊಂದಿದೆ. ಇನ್ನೂ ಶೇಕಡಾ 20ರಷ್ಟನ್ನು ವಶಪಡಿಸಿಕೊಳ್ಳುವ ಪ್ರಸ್ತಾವನೆಯೂ ಕಂಪನಿ ಮುಂದಿದೆ. ಕಳೆದ ಭಾನುವಾರ ಟೆಕ್ ಮಹೀಂದ್ರಾವು ಸತ್ಯಂ ಕಂಪನಿಯನ್ನು ಮಹೀಂದ್ರಾ ಸತ್ಯಂ ಎಂದು ಮರುನಾಮಕರಣಗೊಳಿಸಿತ್ತು.
|