ಟಾಟಾದವರ ಮಹತ್ವಾಕಾಂಕ್ಷೆಯ ನ್ಯಾನೋ ಕಾರು ಬೇಕೆಂದು ಅರ್ಜಿ ಗುಜರಾಯಿಸಿ ಬುಕ್ಕಿಂಗ್ ಹಣ ಪಾವತಿ ಮಾಡಿದ್ದ 206,703 ಮಂದಿಯಲ್ಲಿ ಒಂದು ಲಕ್ಷ ಅದೃಷ್ಟಶಾಲಿಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಗಿದೆ. ಆಯ್ಕೆಯಾದವರಿಗೆ ಮುಂದಿನ ತಿಂಗಳಿನಿಂದ ಕಾರುಗಳ ವಿತರಣೆ ಆರಂಭವಾಗುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.ಈ ವರ್ಷದ ಮಾರ್ಚ್ 23ರಂದು ನ್ಯಾನೋ ಬಹುನಿರೀಕ್ಷಿತ ಕಾರನ್ನು ಟಾಟಾ ಕಂಪನಿ ಅನಾವರಣಗೊಂಡಿತ್ತು. ಕಂಪ್ಯೂಟರೀಕೃತವಾಗಿ ಮೊದಲ ಒಂದು ಲಕ್ಷ ನ್ಯಾನೋ ಮಾಲಕರನ್ನು ಆಯ್ಕೆ ಮಾಡಲಾಗುತ್ತದೆ ಎಂದು ಟಾಟಾ ಆ ಸಂದರ್ಭದಲ್ಲಿ ತಿಳಿಸಿತ್ತು.ಇದೀಗ ಲಾಟರಿ ಮೂಲಕ ಆಯ್ಕೆಯಾಗಿರುವ ಒಂದು ಲಕ್ಷ ಮಂದಿಗೆ ಜುಲೈ ತಿಂಗಳಿನಿಂದ ಕಾರುಗಳ ವಿತರಣೆ ಆರಂಭಿಸಿ 2010ರ ತ್ರೈಮಾಸಿಕ ಅವಧಿ ಕೊನೆಗೊಳ್ಳುವ ಹೊತ್ತಿಗೆ ಪೂರ್ಣಗೊಳಿಸಲಾಗುತ್ತದೆ. ಆಯ್ಕೆಯಾಗಿರುವ ಮಾಲಕರನ್ನು ವೈಯಕ್ತಿಕವಾಗಿ ಕಂಪನಿಯು ಸಂಪರ್ಕಿಸಿ ಮಾಹಿತಿ ನೀಡಲಿದೆ. ಆರಂಭಿಕ ಸುತ್ತಿನಲ್ಲಿ ನೋಂದಣಿ ಮಾಡಿಸಿದ್ದ 106,703 ಮಂದಿಯಲ್ಲಿ 55,021 ಅರ್ಜಿದಾರರನ್ನು ಮೊದಲ ಹಂತದ ವಿತರಣೆಗೆ ಪರಿಗಣಿಸಿಲ್ಲ. ಅವರನ್ನು ಎರಡನೇ ಹಂತಕ್ಕೆ ಪರಿಗಣಿಸಲಾಗುತ್ತದೆ ಎಂದು ಟಾಟಾ ತಿಳಿಸಿದೆ.ಮೊದಲ ಸುತ್ತಿನ ವಿತರಣೆಯಲ್ಲಿ ಕಾರು ಪಡೆಯಲಾಗದವರು ತಮ್ಮ ಬುಕ್ಕಿಂಗ್ ಮೊತ್ತವನ್ನು ವಾಪಸು ಪಡೆಯಬಹುದು. ಆದರೆ ಶೇಕಡಾ 67 ಅಂದರೆ 137,867 ಅರ್ಜಿದಾರರು ತಮ್ಮ ಅವಧಿಗೆ ಕಾಯುವ ಆಯ್ಕೆಯನ್ನು ಮಾಡಿದ್ದಾರೆ. ಅವರಲ್ಲಿ 55,021 ಅರ್ಜಿದಾರರಿಗೆ ಎರಡನೇ ಅವಧಿಯಲ್ಲಿ ಕಾರು ವಿತರಿಸಲಾಗುತ್ತದೆ.ನ್ಯಾನೋ ಬುಕ್ಕಿಂಗ್ ಮಾಡಿ ಕಾರು ಕೈಗೆ ಸಿಗದಿದ್ದರೆ ಅಂತಹ ಅರ್ಜಿದಾರರಿಗೆ ಎರಡು ವರ್ಷದವರೆಗೆ (ಜೂನ್ 23, 2011) ಶೇಕಡಾ 8.5 ಬಡ್ಡಿದರವನ್ನು ಟಾಟಾ ಕಂಪನಿ ನೀಡಲಿದೆ. ಆ ನಂತರವೂ ಸಿಗದಿದ್ದವರಿಗೆ ಶೇಕಡಾ 8.75 ಬಡ್ಡಿಯನ್ನು ಕೊಡಲಾಗುತ್ತದೆ. ಹಾಗೊಂದು ವೇಳೆ ಕಟ್ಟಿರುವ ಹಣವನ್ನು ಅರ್ಜಿದಾರರು ವಾಪಸು ಪಡೆಯಲಿಚ್ಛಿಸಿದರೆ ಅದಕ್ಕೂ ಅವಕಾಶ ಕಲ್ಪಿಸಲಾಗಿದೆ.ಮತ್ತೊಂದು ದಾಳ ಎಸೆತದಿರುವ ಕಂಪನಿಯು, ನ್ಯಾನೋ ಪಡೆಯಲಾಗದ ಅರ್ಜಿದಾರರಿಗೆ ಟಾಟಾ ಇಂಡಿಕಾ ಕಾರುಗಳಲ್ಲಿ ವಿಶೇಷ ಆಫರ್‌ಗಳನ್ನು ನೀಡಲಾಗುತ್ತದೆ ಎಂದಿದೆ. |