ಮೈಕ್ರೋಸಾಫ್ಟ್ ತನ್ನ ಉಚಿತ ಆಂಟಿ ವೈರಸ್ ತಂತ್ರಾಂಶದ ಪ್ರಾಯೋಗಿಕ ಆವೃತ್ತಿಯನ್ನು ಮಂಗಳವಾರ ಬಿಡುಗಡೆ ಮಾಡಿದ್ದು, ವಿಂಡೋಸ್ ಮೇಲೆ ಆಕ್ರಮಣವೆಸಗುವ ವೈರಸ್‌ಗಳು ಹಾಗೂ ಮಾಲ್‌ವೇರ್‌ಗಳನ್ನು ಸಶಕ್ತವಾಗಿ ತೊಲಗಿಸುವ ಭರವಸೆ ಮೂಡಿಸಿದೆ.ಈ ಸಾಫ್ಟ್‌ವೇರನ್ನು 'ಮೈಕ್ರೋಸಾಫ್ಟ್ ಸೆಕ್ಯುರಿಟಿ ಎಸೆನ್ಸಿಯಲ್ಸ್' ಎಂದು ಹೆಸರಿಸಲಾಗಿದೆ. ಇದರ ಸಂಪೂರ್ಣ ಆವೃತ್ತಿ ಸೆಪ್ಟೆಂಬರ್ ಹೊತ್ತಿಗೆ ಲಭ್ಯವಾಗಲಿದೆ. ಪ್ರಾಯೋಗಿಕ ಆವೃತ್ತಿಯು ಭಾರತದಲ್ಲಿ ಅಲಭ್ಯ.ಇದೀಗ ಬಿಡುಗಡೆ ಮಾಡಲಾಗಿರುವ ವಿಂಡೋಸ್ ಆಂಟಿ ವೈರಸ್ ಸಾಫ್ಟ್‌ವೇರ್ ವಿಂಡೋಸ್ ಎಕ್ಸ್‌ಪಿ, ವಿಂಡೋಸ್ ವಿಸ್ತಾ ಹಾಗೂ ವಿಂಡೋಸ್ 7 ಅಪರೇಟಿಂಗ್ ಸಿಸ್ಟಮ್‌ಗಳಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿರುತ್ತದೆ. ಆದರೆ ಲೈಸೆನ್ಸ್ ಹೊಂದಿದ ಅಪರೇಟಿಂಗ್ ಸಿಸ್ಟಂ ಆಗಿರುವುದು ಕಡ್ಡಾಯ. ವೈರಸ್‌ಗಳು, ಸ್ಪೈವೇರ್, ರೂಟ್‌ಕಿಟ್ಸ್ ಮತ್ತು ಟಾರ್ಜನ್ಸ್‌ಗಳು ಸೇರಿದಂತೆ ಹೆಚ್ಚಿನ ಕಂಪ್ಯೂಟರ್ ಗಂಡಾಂತರಗಳನ್ನು ಮೈಕ್ರೋಸಾಫ್ಟ್ ಆಂಟಿವೈರಸ್ ನೀಗಿಸುವ ಭರವಸೆ ನೀಡಿದೆ. ಜೂನ್ 23ರಂದು ಇದರ ಪ್ರಾಯೋಗಿಕ ಆವೃತ್ತಿ ಬಿಡುಗಡೆಯಾಗಿದ್ದು ಅಮೆರಿಕಾ, ಇಸ್ರೇಲ್, ಬ್ರೆಜಿಲ್‌ನ ಆರಂಭಿಕ 75,000 ಗ್ರಾಹಕರಿಗೆ ಮಾತ್ರ ಇದು ಲಭ್ಯ. ಚೀನಾದಲ್ಲಿ ಜುಲೈ ತಿಂಗಳ ಮಧ್ಯದಲ್ಲಿ ಬೀಟಾ ಆವೃತ್ತಿ ಲಭ್ಯವಾಗಲಿದೆ.ವಿಂಡೋಸ್ ಅಪರೇಟಿಂಗ್ ಸಿಸ್ಟಂಗಳಲ್ಲಿ ತನ್ನದೇ ಆದ ಉಚಿತ ಹಾಗೂ ಪ್ರಭಾವಿ ಆಂಟಿ ವೈರಸ್ ಸಾಫ್ಟ್‌ವೇರ್ ಇಲ್ಲದಿರುವ ಕಾರಣಕ್ಕೆ ಮೈಕ್ರೋಸಾಫ್ಟ್ ವ್ಯಾಪಕ ಟೀಕೆಗೊಳಗಾಗಿತ್ತು. ಇದೇ ಹಿನ್ನಲೆಯಲ್ಲಿ ವಿಂಡೋಸ್ ಎದುರು ಲಿನಕ್ಸ್ ಮತ್ತು ಆಪಲ್ ಅಪರೇಟಿಂಗ್ ಸಿಸ್ಟಂಗಳು ಸೆಕ್ಯುರಿಟಿ ವಿಚಾರದಲ್ಲಿ ಪ್ರಬಲವಾಗಿ ಕಂಡು ಬಂದಿದ್ದವು.' ವಿಂಡೋಸ್ ಲೈವ್ ವನ್ ಕೇರ್' ಸೆಕ್ಯುರಿಟಿ ಸಾಫ್ಟ್‌ವೇರ್ ತಯಾರಿಕೆಯಲ್ಲಿ ನಿರತವಾಗಿದ್ದ ಮೈಕ್ರೋಸಾಫ್ಟ್ ಕಳೆದ ನವೆಂಬರ್‌ನಲ್ಲಿ ತನ್ನ ನಿರ್ಧಾರವನ್ನು ಬದಲಾಯಿಸಿ, ಆ ವ್ಯಾಪಾರೀಕರಣದ ಸಾಫ್ಟ್‌ವೇರ್ ಬದಲಿಗೆ ಉಚಿತ ಮಾಲ್‌ವೇರ್ ವಿರೋಧಿ ಸಾಫ್ಟ್‌ವೇರ್ ನೀಡುವುದಾಗಿ ಪ್ರಕಟಿಸಿತ್ತು. ಈಗ ಅದರಂತೆ ನಡೆದುಕೊಂಡಿದೆ. ಮೈಕ್ರೋಸಾಫ್ಟ್ ವೆಬ್‌ಸೈಟ್‌ನಲ್ಲಿ ಡೌನ್‌ಲೋಡ್‌ಗೆ ಲಭ್ಯವಿರುವ ಬೀಟಾ ಆವೃತ್ತಿಯ ಬಗ್ಗೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗಿದ್ದು, ನಿರೀಕ್ಷೆಯ ಮಟ್ಟವನ್ನು ಮೀರಿದೆ ಎಂದು ಹಲವು ವಿದೇಶೀ ಗ್ರಾಹಕರು ಪ್ರತಿಕ್ರಿಯಿಸಿದ್ದಾರೆ. |