ಕಳೆದೆರಡು ವರ್ಷಗಳಲ್ಲಿ ಭಾರತೀಯ ಕಂಪನಿಗಳು ಅಮೆರಿಕಾದ ವಿವಿಧ ವಲಯಗಳಲ್ಲಿನ 143 ಕಂಪನಿಗಳನ್ನು ಸ್ವಾಧೀನಪಡಿಸಿಕೊಂಡಿದ್ದು, 30 ಸಾವಿರಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಗೆ ಕಾರಣವಾಗಿವೆ ಎಂದು ಸಮೀಕ್ಷೆಯೊಂದು ಬಹಿರಂಗಪಡಿಸಿದೆ.
2007-08ರ ಅವಧಿಯಲ್ಲೇ 94 ಕಂಪನಿಗಳನ್ನು 0.8 ಮಿಲಿಯನ್ ಅಮೆರಿಕನ್ ಡಾಲರ್‌ನಿಂದ 1,005 ಮಿಲಿಯನ್ ಡಾಲರ್‌ಗಳ ನಡುವಿನ ಮೊತ್ತಕ್ಕೆ ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಇವುಗಳಲ್ಲಿ 55 ಕಂಪನಿಗಳ ಒಪ್ಪಂದಗಳ ವಿವರಗಳು ಮಾತ್ರ ಬಹಿರಂಗಗೊಂಡಿದ್ದು, ಅವುಗಳ ವ್ಯವಹಾರದ ಮೊತ್ತ 4,432 ಮಿಲಿಯನ್ ಡಾಲರ್.
2008-09ರ ಸಾಲಿನಲ್ಲಿ 49 ವಿವಿಧ ಅಮೆರಿಕನ್ ಕಂಪನಿಗಳನ್ನು ಭಾರತೀಯ ಕಂಪನಿಗಳು ತೆಕ್ಕೆಗೆ ತೆಗೆದುಕೊಂಡಿದ್ದವು. ಇವುಗಳಲ್ಲಿ 24 ಕಂಪನಿಗಳ ವ್ಯವಹಾರ ಲೆಕ್ಕಾಚಾರಗಳು ಮಾತ್ರ ತಿಳಿದು ಬಂದಿದೆ. ಅವುಗಳ ಒಟ್ಟು ಮೌಲ್ಯ 960 ಮಿಲಿಯನ್ ಡಾಲರ್. ಒಟ್ಟು ವ್ಯವಹಾರಗಳು 0.70 ಮಿಲಿಯನ್ ಡಾಲರ್‌ಗಳಿಂದ 172 ಮಿಲಿಯನ್ ಡಾಲರ್‌ಗಳ ನಡುವೆ ನಡೆದಿದೆ.
ಅಮೆರಿಕಾದಲ್ಲಿನ ಭಾರತೀಯ ರಾಯಭಾರಿ ಮೀರಾ ಶಂಕರ್‌ರವರು ಈಸ್ಟ್ ವೆಸ್ಟ್ ಸೆಂಟರ್‌ನಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಿದ ಈ ಸಮೀಕ್ಷೆಯನ್ನು 'ಅಮೆರಿಕಾದ ನಿರುದ್ಯೋಗ, ಬಂಡವಾಳ ಹೆಚ್ಚಳ ಮತ್ತು ತೆರಿಗೆ ಆಧಾಯಕ್ಕೆ ಭಾರತದ ಕೊಡುಗೆ - 2007-09ರಲ್ಲಿ ಭಾರತೀಯ ಕಂಪನಿಗಳಿಂದ ನೇರ ಹೂಡಿಕೆ' ಎಂದು ಹೆಸರಿಸಲಾಯಿತು.
ಐಟಿ ಮತ್ತು ಐಟಿಇಎಸ್ ವಿಭಾಗದಲ್ಲಿ ಅಮೆರಿಕಾದ ಕಂಪನಿಗಳನ್ನು ಸ್ವಾಧೀನಪಡಿಸಿಕೊಂಡ ಅಗ್ರ ಐದು ಭಾರತೀಯ ಕಂಪನಿಗಳ ಕುರಿತು ಸಂಕ್ಷಿಪ್ತ ಮಾಹಿತಿಯನ್ನು ಕೆಳಗೆ ನೀಡಲಾಗಿದೆ.
1. ವಿಪ್ರೋ ಲಿಮಿಟೆಟ್ ಭಾರತೀಯ ಕಂಪನಿಯು ಅಮೆರಿಕಾದ 'ಇನ್‌ಫೋಕ್ರಾಸಿಂಗ್ ಐಎನ್‌ಸಿ'ಯನ್ನು ಆಗಸ್ಟ್ 2007ರಲ್ಲಿ 548 ಮಿಲಿಯನ್ ಡಾಲರ್‌ಗಳಿಗೆ ಖರೀದಿಸಿತು.
2. ಅಮೆರಿಕಾದ 'ರೆಗ್ಯುಲಸ್ ಗ್ರೂಪ್ ಎಲ್‌ಎಲ್‌ಸಿ'ಯನ್ನು 80 ಮಿಲಿಯನ್ ಡಾಲರ್ ಮೊತ್ತಕ್ಕೆ ಭಾರತದ 3ಐ ಇನ್ಫೋಟೆಕ್ ಲಿಮಿಟೆಟ್ ಸಂಸ್ಥೆಯು ಏಪ್ರಿಲ್ 2008ರಲ್ಲಿ ತೆಕ್ಕೆಗೆಳೆದುಕೊಂಡಿತ್ತು.
3. ಡಿಸೆಂಬರ್ 2007ರಲ್ಲಿ ಅಸೆಂಟಿಯಾ ಟೆಕ್ನಾಲಜೀಸ್ ಲಿಮಿಟೆಡ್ ಎಂಬ ಭಾರತೀಯ ಕಂಪನಿಯು ಅಮೆರಿಕಾದ ಡೆನ್‌ಮೆಡ್ ಟ್ರಾನ್ಸ್‌ಕ್ರಿಪ್ಶನ್ ಸರ್ವಿಸ್ ಎಂಬ ಕಂಪನಿಯನ್ನು 66 ಮಿಲಿಯನ್ ಡಾಲರ್ ಮೊತ್ತಕ್ಕೆ ಸ್ವಾಧೀನಪಡಿಸಿಕೊಂಡಿತ್ತು.
4. ಅಮೆರಿಕಾದ ಜಿಎಸ್‌ಆರ್ ಫಿಸಿಸಿಯನ್ಸ್ ಬಿಲ್ಲಿಂಗ್ ಐಎನ್‌ಸಿ/ಜಿಎಸ್‌ಆರ್ ಸಿಸ್ಟಮ್ಸ್ ಕಂಪನಿಯನ್ನು ಭಾರತದ ಅಸೆನ್ಸಿಯಾ ಟೆಕ್ನಾಲಜೀಸ್ ಲಿಮಿಟೆಡ್ ಕಂಪನಿಯು ಜುಲೈ 2007ರಲ್ಲಿ 63 ಮಿಲಿಯನ್ ಡಾಲರ್‌ಗಳಿಗೆ ಕೊಂಡುಕೊಂಡಿತ್ತು.
5. ಮಾರ್ಚ್ 2008ರಲ್ಲಿ 55 ಮಿಲಿಯನ್ ಡಾಲರ್ ಮೊತ್ತಕ್ಕೆ ಅಮೆರಿಕಾದ ಜಾಸ್ ಎಂಡ್ ಅಸೋಸಿಯೇಟೆಡ್ ಐಎನ್‌ಸಿ/ಎಸ್‌ಡಿಜಿ ಕಾರ್ಪೋರೇಶನ್ ಸಂಸ್ಥೆಯನ್ನು ಭಾರತದ ಮಾಸ್ಕಾನ್ ಗ್ಲೋಬಲ್ ಲಿಮಿಟೆಡ್ ವಶಕ್ಕೆ ತೆಗೆದುಕೊಂಡಿತ್ತು.
|