ಮುಂಬರುವ ಕೇಂದ್ರ ಬಜೆಟ್‌ನಲ್ಲಿ ಇ-ಬೈಕ್ ಬಿಡಿ ಭಾಗಗಳ ಮೇಲೆ ವಿಧಿಸಲಾಗುವ ಮೇಲ್ತೆರಿಗೆಯನ್ನು ಹಿಂದಕ್ಕೆ ಪಡೆದುಕೊಳ್ಳಬೇಕು ಹಾಗೂ ನೂತನ ಮತ್ತು ಪುನರ್ಬಳಕೆ ಇಂಧನ ನೀತಿಗಳಡಿಯಲ್ಲಿ ಇ-ಬೈಕುಗಳಿಗೆ ಶೇಕಡಾ 30ರಷ್ಟು ಸಬ್ಸಿಡಿ ನೀಡುವ ಮೂಲಕ ಉತ್ತೇಜನ ನೀಡಬೇಕು ಎಂದು ಎಲೆಕ್ಟ್ರಾನಿಕ್ ಬೈಕ್ ತಯಾರಕರು ಒತ್ತಾಯಿಸಿದ್ದಾರೆ.ಇ-ಬೈಕ್ ಉದ್ಯಮವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮುಂಬರುವ ಕೇಂದ್ರ ಮುಂಗಡ ಪತ್ರದಲ್ಲಿ ಸರಕಾರವು ಕೆಲವು ವಿಶೇಷ ನೀತಿಗಳನ್ನು ಪ್ರಕಟಿಸಬೇಕು. ಪ್ರಮುಖವಾಗಿ ಇ-ಬೈಕ್ ದೇಶೀ ಉದ್ಯಮ ಬೆಳವಣಿಗೆಗೆ ಅಡಚಣೆಯಾಗಿರುವ ವಿದ್ಯುತ್‌ಚಾಲಿತ ಬೈಕುಗಳ ಬಿಡಿಭಾಗಗಳ ಆಮದಿನ ಮೇಲೆ ವಿಧಿಸಲಾಗುವ ಮೇಲ್ತೆರಿಗೆ (ಸಿವಿಡಿ)ಯನ್ನು ಹಿಂತೆಗೆದುಕೊಳ್ಳಬೇಕು ಎಂದು 'ಹೀರೋ ಎಲೆಕ್ಟ್ರಿಕ್' ಕಾರ್ಯನಿರ್ವಹಣಾಧಿಕಾರಿ ಸುರೀಂದರ್ ಗಿಲ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ಇ-ಬೈಕ್ ಬಿಡಿ ಭಾಗಗಳ ಆಮದಿನ ಮೇಲೆ ಕೇಂದ್ರ ಸರಕಾರವು ಪ್ರಸಕ್ತ ಶೇಕಡಾ ಎಂಟರಷ್ಟು ಸಿವಿಡಿ ವಿಧಿಸುತ್ತದೆ. ಎಲೆಕ್ಟ್ರಾನಿಕ್ ಬೈಕ್ ತಯಾರಿಕೆಗಾಗಿ ಮೋಟಾರು, ಬ್ಯಾಟರಿ, ಇತರ ಎಲೆಕ್ಟ್ರಾನಿಕ್ ಭಾಗಗಳು ಮತ್ತು ಯಾಂತ್ರಿಕ ಭಾಗಗಳನ್ನು ಚೀನಾ ಮತ್ತು ತೈವಾನ್‌ನಿಂದ ಆಮದು ಮಾಡಿಕೊಳ್ಳುವುದು ಅನಿವಾರ್ಯ. ಒಟ್ಟಾರೆ ಶೇಕಡಾ 55ಕ್ಕಿಂತಲೂ ಹೆಚ್ಚು ಭಾಗಗಳನ್ನು ಆಮದು ಮಾಡಿಕೊಳ್ಳುವುದರಿಂದ ಮೇಲ್ತೆರಿಗೆ ಭರಿಸಲು ಕಷ್ಟವಾಗುತ್ತಿದೆ ಎನ್ನುವುದು ಇ-ಬೈಕ್ ತಯಾರಕರ ಅಳಲು.ಅಲ್ಲದೆ ನೂತನ ಮತ್ತು ಪುನರ್ಬಳಕೆ ಇಂಧನ ನೀತಿಯಡಿಯಲ್ಲಿ ಪರಿಸರ ಸ್ನೇಹಿ ವಾಹನಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರಕಾರವು ಕನಿಷ್ಠ ಶೇಕಡಾ 30ರಷ್ಟು ಸಬ್ಸಿಡಿಯನ್ನು ಕೂಡ ಖರೀದಿ ಸಂದರ್ಭದಲ್ಲಿ ಒದಗಿಸಬೇಕು ಎಂದು ಬೈಕ್ ಉದ್ಯಮವಲಯ ಅಭಿಪ್ರಾಯಪಟ್ಟಿದೆ."30 ಕ್ಕೂ ಹೆಚ್ಚು ದೇಶಗಳು ಈ ರೀತಿಯ ಸಹಾಯಧನ ನೀಡುವ ಮೂಲಕ ಇ-ಬೈಕುಗಳ ಬಳಕೆಗೆ ಉತ್ತೇಜನ ನೀಡುತ್ತಿವೆ. ಹಾಗಾಗಿ ಭಾರತ ಸರಕಾರವೂ ಈ ಬಗ್ಗೆ ಗಂಭೀರವಾಗಿ ಯೋಚನೆ ಮಾಡಬೇಕು" ಎಂದು ಗಿಲ್ ತಿಳಿಸಿದ್ದಾರೆ.ಹಾಗೊಂದು ವೇಳೆ ತಮ್ಮ ಬೇಡಿಕೆಗಳನ್ನು ಕೇಂದ್ರ ಸರಕಾರವು ಕಿವಿಗೆ ಹಾಕಿಕೊಂಡು ಈಡೇರಿಸಲು ಒಪ್ಪಿಕೊಂಡಲ್ಲಿ ಮುಂದಿನ ಮೂರರಿಂದ ನಾಲ್ಕು ವರ್ಷಗಳಲ್ಲಿ ಆರರಿಂದ ಎಂಟು ಲಕ್ಷ ಇ-ಬೈಕ್‌ಗಳನ್ನು ಮಾರಾಟ ಮಾಡುವ ಭರವಸೆ ಉದ್ಯಮಕ್ಕಿದೆ. ಯೋ ಬೈಕ್ಸ್, ಅಲ್ಟ್ರಾ ಮೋಟಾರ್, ಹೀರೋ ಎಲೆಕ್ಟ್ರಿಕ್, ಏವನ್ ಸೈಕಲ್ಸ್ ಮುಂತಾದ ಪ್ರಮುಖ ಕಂಪನಿಗಳು ಇ-ಬೈಕ್ ಉದ್ಯಮದಲ್ಲಿ ತೊಡಗಿಕೊಂಡಿದ್ದು, ಮುಂದಿನ ದಿನಗಳಲ್ಲಿ ಹೆಚ್ಚು ಬಳಕೆಗೆ ಬರಬಹುದೆಂಬ ನಿರೀಕ್ಷೆ ಸಂಸ್ಥೆಗಳದ್ದು. |