ವಿಮಾನದಲ್ಲಿ ಪ್ರಯಾಣಿಸುವುದು ತೀರಾ ದುಬಾರಿ; ನಿಗದಿಪಡಿಸಿದ ಸಮಯದವರೆಗೆ ಕಾಯಬೇಕು, ಎಲ್ಲಾ ಕಡೆ ಹೋಗಲಾಗದು, ರಸ್ತೆಯಲ್ಲಿ ಓಡಾಡಲು ಟ್ರಾಫಿಕ್ ಅಡ್ಡ ಬರುತ್ತದೆ ಎಂದೆಲ್ಲಾ ಕಿರಿಕಿರಿ ಅನುಭವಿಸುತ್ತಿರುವವರು ಇನ್ನು ಕೇವಲ ಎರಡೇ ವರ್ಷ ಕಾದರೆ ಸಾಕು. ಅಷ್ಟರಲ್ಲಿ ಮಾರುಕಟ್ಟೆಯಲ್ಲಿ 'ಹಾರುವ ಕಾರು' ಬಂದಿರುತ್ತದೆ..!ಹೌದು.. ಹಾರುವ ತಟ್ಟೆಗಳ ಕುರಿತು ಕೇಳಿದ್ದವರಿಗಿದು ಮತ್ತೊಂದು ಕೌತುಕ. ಅಮೆರಿಕಾದ 'ಟೆರ್ರಾಫೂಗಿಯಾ ಟ್ರಾನ್ಸಿಷನ್' ಎಂಬ ಕಂಪನಿಯೊಂದು 2011ರಲ್ಲಿ 'ದಿ ಫ್ಲೈಯಿಂಗ್ ಕಾರ್' ಎಂದೇ ಹೆಸರಿಸಿರುವ ಟೂ ಇನ್ ವನ್ ಕಾರು/ವಿಮಾನವನ್ನು ಬಿಡುಗಡೆ ಮಾಡಲಿದೆ.ಎರಡು ಸೀಟುಗಳುಳ್ಳ ಈ ಹಾರುವ ಕಾರನ್ನು ನೀವು ಬಯಸಿದಂತೆ ಬಳಸಬಹುದಾಗಿದೆ. ರಸ್ತೆಯಲ್ಲಿ ಪ್ರಯಾಣಿಸಬೇಕೆಂದಿದ್ದಾಗ ಈ ವಾಹನವು ತನ್ನ ರೆಕ್ಕೆಗಳನ್ನು ಸ್ವಯಂಚಾಲಿತವಾಗಿ ಕೇವಲ 30 ಸೆಕುಂಡುಗಳೊಳಗೆ ಮಡಚಿಕೊಂಡು ಕಾರಾಗಿ ರೂಪಾಂತರ ಹೊಂದುತ್ತದೆ.ಈ ಹಾರುವ ಕಾರನ್ನು ಆಕಾಶದಲ್ಲಿ 725 ಕಿಲೋ ಮೀಟರುಗಳವರೆಗೆ ಹಾರಾಟ ನಡೆಸಬಹುದಾಗಿದೆ. ಗಂಟೆಗೆ 115 ಕಿಲೋ ಮೀಟರ್ ವೇಗದಲ್ಲಿ ಇದು ಹಾರುತ್ತದೆ.ಈ ಕಾರು ಗ್ಯಾಸೊಲಿನ್ ಇಂಧನವನ್ನು ಬಳಸುತ್ತದೆ. ವಾಹನದ ಎದುರಿನ ಚಕ್ರಗಳನ್ನು ನಿಯಂತ್ರಣ ಮಾಡುವ ಮೂಲಕ ರಸ್ತೆಯಲ್ಲಿ ಇದನ್ನು ಚಾಲನೆ ಮಾಡಬಹುದಾಗಿದೆ. ರೆಕ್ಕೆಗಳನ್ನು ಮಡಚಿದ ನಂತರ ಸಾಮಾನ್ಯ ಕಾರು ಗ್ಯಾರೇಜುಗಳಲ್ಲೂ ಈ ಹಾರುವ ಕಾರನ್ನು ಪಾರ್ಕ್ ಮಾಡಬಹುದು. ಮಾಮೂಲಿ ರಸ್ತೆಗಳಲ್ಲೂ ಇದನ್ನು ಬಳಸಲು ಯಾವುದ ಸಮಸ್ಯೆಗಳಿಲ್ಲ ಎಂದು ಕಂಪನಿ ಹೇಳಿಕೊಂಡಿದೆ.ಇವಿಷ್ಟು ವಿವರಗಳನ್ನು ಕುತೂಹಲದಿಂದ ನೋಡಿದ ನೀವೀಗ ಟಾಟಾದವರ ನ್ಯಾನೋ ಕಾರಿಗಿಂತ ಈ ಕಾರೇ ಉತ್ತಮ ಎಂದು ಯೋಚಿಸಿದ್ದರೆ ಸ್ವಲ್ಪ ತಡೆಯಿರಿ. ಅದಕ್ಕೂ ಮೊದಲು ಹಾರುವ ಕಾರಿನ 'ಹಾರುವ ಬೆಲೆ'ಯನ್ನೂ ನೋಡಿಕೊಳ್ಳಿ.ಕಂಪನಿಯ ಅಂದಾಜು ಬೆಲೆ ಈ ಕಾರಿಗೆ ಒಂದು ಕೋಟಿ ರೂಪಾಯಿ (200,000 ಅಮೆರಿಕನ್ ಡಾಲರ್). 60ಕ್ಕೂ ಹೆಚ್ಚು ಕಾರುಗಳಿಗೆ ಈಗಾಗಲೇ ಸಿರಿವಂತರು ಅಡ್ವಾನ್ಸ್ ಸಮೇತ ಬೇಡಿಕೆ ಪಟ್ಟಿ ಸಲ್ಲಿಸಿದ್ದಾರಂತೆ.ಮುಂದಿನ ನಿರ್ಧಾರ ನಿಮಗೆ ಬಿಟ್ಟದ್ದು..! |