ದೇಶದಲ್ಲಿ 1000 ರೂಪಾಯಿಯ ನಕಲಿ ನೋಟುಗಳು ಚಲಾವಣೆಯಾಗುತ್ತಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಎಚ್ಚರಿಕೆ ನೀಡಿದೆ. ಸಾವಿರ ರೂಪಾಯಿಯ 2AQ ಮತ್ತು 8AC ಸರಣಿಗಳಲ್ಲಿ ನಕಲಿ ನೋಟುಗಳಿರುವುದನ್ನು ಅದು ಪತ್ತೆ ಹಚ್ಚಿದೆ.
ಈ ಸರಣಿಗಳ ನೋಟುಗಳಲ್ಲಿ ವ್ಯವಹಾರ ನಡೆಸುವಾಗ ಬ್ಯಾಂಕುಗಳು ಜಾಗರೂಕತೆ ವಹಿಸಬೇಕೆಂದು ಆರ್‌ಬಿಐ ಸೂಚನೆ ನೀಡಿದೆ. ಹಾಗೆಂದು ಈ ಸರಣಿಯ ಎಲ್ಲಾ ನೋಟುಗಳು ನಕಲಿಯಲ್ಲವೆಂಬುದನ್ನೂ ಆರ್‌ಬಿಐ ಬ್ಯಾಂಕ್ ಸ್ಪಷ್ಟಪಡಿಸಿದೆ.
ಚೆನ್ನೈಯಲ್ಲಿನ ಭಾರತೀಯ ಸ್ಟೇಟ್ ಬ್ಯಾಂಕ್ ಎಟಿಎಂವೊಂದರಲ್ಲಿ ಬಿಲ್ಡರ್ ಒಬ್ಬರಿಗೆ ಸಾವಿರ ರೂಪಾಯಿಯ ನಕಲಿ ನೋಟುಗಳು ಸಿಕ್ಕಿದ ನಂತರ ಆರ್‌ಬಿಐ ಈ ಎಚ್ಚರಿಕೆಯನ್ನು ರವಾನಿಸಿದೆ.
1000 ರೂಪಾಯಿಯ ಒರಿಜಿನಲ್ ನೋಟುಗಳು ಹೇಗಿರುತ್ತವೆ?
ಬಣ್ಣ ಬದಲಾವಣೆಯಲ್ಲಿ: ಈ ನೋಟಿನ 1000 ಎಂದು ಬರೆದಿರುವ ಅಂಕೆಯು ನೋಟನ್ನು ನೇರವಾಗಿ ಇರಿಸಿದಾಗ ಹಸಿರು ಬಣ್ಣದಲ್ಲಿರುತ್ತದೆ, ಸ್ವಲ್ಪ ಓರೆಯಾಗಿ ನೋಡಿದಾಗ ನೀಲಿ ಬಣ್ಣಕ್ಕೆ ತಿರುಗುತ್ತದೆ ಮತ್ತು ಅದರ ಅಕ್ಷರ ಗಾತ್ರವೂ ಕಿರಿದಾಗುತ್ತದೆ.
ಗುಪ್ತಚಿತ್ರ: ನೋಟನ್ನು ಅಡ್ಡವಾಗಿ ಹಿಡಿದಾಗ, ಬಲಗಡೆಯಲ್ಲಿರುವ ನೇರವಾದ ಪಟ್ಟಿಯಲ್ಲಿ ನೋಟಿನ ಮೌಲ್ಯದ ಅಂಕಿ 1000ದ ಚಿತ್ರವನ್ನು ನೋಡಬಹುದಾಗಿದೆ.
ಸುರಕ್ಷತಾ ಪಟ್ಟಿ: ನೈಜ ನೋಟಿನಲ್ಲಿ ಮೂರು ಮಿಲಿಮೀಟರ್ ಅಗಲವಿರುವ ಸುರಕ್ಷತಾ ಪಟ್ಟಿಯೊಂದಿರುತ್ತದೆ. ಅದರಲ್ಲಿ 'ಒಂದು ಸಾವಿರ', ಹಿಂದಿಯಲ್ಲಿ 'ಭಾರತ' ಮತ್ತು 'ಆರ್‌ಬಿಐ' ಎಂಬ ಬರಹಗಳಿರುತ್ತವೆ.
ಸೂಕ್ಷ್ಮಬರಹಗಳು: ನೈಜ ನೋಟಿನಲ್ಲಿ ಮಹಾತ್ಮಾ ಗಾಂಧೀಜಿಯವರ ಚಿತ್ರ ಮತ್ತು ಅಡ್ಡ ಬ್ಯಾಂಡ್ ನಡುವೆ ಸೂಕ್ಷ್ಮವಾಗಿ ಬರೆಯಲಾಗಿರುವ 'ಆರ್‌ಬಿಐ' ಮತ್ತು ಸಂಖ್ಯೆ '1000' ಎಂಬುದನ್ನು ಭೂತಗನ್ನಡಿಯ ಸಹಾಯದಿಂದ ಗುರುತಿಸಬಹುದು.
ವಾಟರ್‌ಮಾರ್ಕ್: ನಿಜವಾದ 1000 ರೂಪಾಯಿಯ ನೋಟನ್ನು ಬೆಳಕಿನ ವಿರುದ್ಧ ಹಿಡಿದು ನೋಡಿದಾಗ ಬಿಳಿಯಾಗಿ ಕಾಣಿಸುವ ಖಾಲಿ ಜಾಗದಲ್ಲಿ ಗಾಂಧೀಜಿಯವರ ಚಿತ್ರ ಮತ್ತು ಸಂಖ್ಯೆ '1000'ದ ಅಚ್ಚು ಕಾಣಿಸುತ್ತದೆ.
|