ಸಂಕಷ್ಟಕ್ಕೆ ಸಿಲುಕಿರುವ ಏರ್ ಇಂಡಿಯಾವನ್ನು ಸರಕಾರ ಮೇಲಕ್ಕೆತ್ತಲು ಸಿದ್ಧವಿದೆ ಎಂದು ಪ್ರಧಾನಿ ಮನಮೋಹನ್ ಸಿಂಗ್ ಭರವಸೆ ನೀಡಿದ್ದು, ವಿಮಾನಯಾನ ಸಂಸ್ಥೆಯು ತನ್ನ ರೂಪುರೇಷೆಯನ್ನು ಸಂಪೂರ್ಣವಾಗಿ ಬದಲಾಯಿಸಿಕೊಳ್ಳಬೇಕು ಎಂಬ ನಿಬಂಧನೆಯನ್ನೂ ಜತೆಗೆ ವಿಧಿಸಿದ್ದಾರೆ.
ಏರ್ ಇಂಡಿಯಾವು ತನ್ನ ಖರ್ಚುವೆಚ್ಚಗಳನ್ನು ಕಡಿಮೆ ಮಾಡಬೇಕು, ಅಲ್ಲದೆ ತನ್ನ ರೂಪುರೇಷೆಗಳಲ್ಲಿ ಬದಲಾವಣೆ ಮಾಡಿಕೊಳ್ಳಬೇಕು ಎಂಬ ನಿಬಂಧನೆಗಳನ್ನು ಸಿಂಗ್ ವಿಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಪರಿಹಾರ ಪ್ಯಾಕೇಜ್‌ಗೆ ಸಂಬಂಧಪಟ್ಟಂತೆ ಪ್ರಧಾನಿಯವರನ್ನು ಭೇಟಿಯಾದ ನಂತರ ಮಾತನಾಡಿದ ನಾಗರಿಕ ವಿಮಾನಯಾನ ಸಚಿವ ಪ್ರಫುಲ್ ಪಟೇಲ್, ಯೋಜನೆಗಳನ್ನು ಪುನರ್ ರಚನೆಗೊಳಿಸಿ ಶೀಘ್ರದಲ್ಲೇ ಕ್ಯಾಬಿನೆಟ್ ಕಾರ್ಯದರ್ಶಿಯವರ ನೇತೃತ್ವದ ಕಾರ್ಯದರ್ಶಿಗಳ ಸಮಿತಿಗೆ ನೀಡುವಂತೆ ಸೂಚಿಸಿದ್ದಾರೆ ಎಂದರು.
"ಏರ್ ಇಂಡಿಯಾದ ಬೆಂಬಲಕ್ಕೆ ಸರಕಾರ ಸಂಪೂರ್ಣ ಸಿದ್ಧವಿದೆ ಎಂದು ಪ್ರಧಾನಿಯವರು ತಿಳಿಸಿದ್ದಾರೆ. ಇದು ರಾಷ್ಟ್ರೀಯ ಯಾನ ಸಂಸ್ಥೆ. ಅದು ನಮ್ಮ ಹೆಮ್ಮೆ ಕೂಡ. ಆದರೆ ಅದಕ್ಕಾಗಿ ಏರ್ ಇಂಡಿಯಾ ತಕ್ಷಣದಿಂದಲೇ ಕಾರ್ಯಪ್ರವೃತ್ತವಾಗಬೇಕು. ಇಲ್ಲೇನೋ ಸಮಸ್ಯೆಯಾಗಿದೆ ಎಂಬುದನ್ನು ಉದ್ಯೋಗಿಗಳು ಅರಿತುಕೊಳ್ಳಬೇಕು. ಇಲ್ಲದಿದ್ದರೆ ಸಮಸ್ಯೆ ಹಿರಿದಾಗುತ್ತಾ ಹೋಗುತ್ತದೆ" ಎಂದು ಪಟೇಲ್ ತಿಳಿಸಿದರು.
ಏರ್ ಇಂಡಿಯಾವು ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗಿದೆ. ಅದು ವ್ಯವಸ್ಥಾತ್ಮಕವಾಗಿ, ಹಣಕಾಸು ವಿಚಾರದಲ್ಲಿ ಮತ್ತು ಮಾನವ ಸಾಮರ್ಥ್ಯದಲ್ಲೂ ಬುದ್ಧಿಶಕ್ತಿಯನ್ನು ಬಳಸಬೇಕು. ಇಂತಹ ಪ್ರಮುಖ ಹೆಜ್ಜೆಗಳನ್ನು ಇಡದ ಹೊರತು ಅದು ಚೇತರಿಸಿಕೊಳ್ಳದು ಮತ್ತು ಸರಕಾರ ಕೂಡ ತನ್ನ ಬೆಂಬಲವನ್ನು ಮುಂದುವರಿಸಲು ಸಾಧ್ಯವಾಗದು ಎಂದು ಪಟೇಲ್ ವಿವರಿಸಿದ್ದಾರೆ.
|