ದೇಶಿಯ ಹಾರಾಟದಲ್ಲಿ ಹೆಚ್ಚಳ ಹಾಗೂ ಕಡಿಮೆ ದರ ಮತ್ತು ಸಾಮಾನ್ಯ ಪ್ರವಾಸಿಗರಿಗಾಗಿ ಸಂಪೂರ್ಣ ಸೇವೆಯನ್ನು ನೀಡಲು ಏರ್‌ಇಂಡಿಯಾ ಬದ್ಧವಾಗಿದೆ ಎಂದು ಮೂಲಗಳು ತಿಳಿಸಿವೆ. ಬುಧವಾರದಂದು ಪ್ರಧಾನಿ ಮನಮೋಹನ್ ಸಿಂಗ್, 90 ನಿಮಿಷಗಳ ಕಾಲ ನಾಗರಿಕ ವಿಮಾನಯಾನ ಸಚಿವರೊಂದಿಗೆ ಮಾತುಕತೆ ನಡೆಸಿದ್ದು, ಏರ್‌ಇಂಡಿಯಾಗೆ ಅಗತ್ಯವಿರುವ ಬೇಲೌಟ್ ಪ್ಯಾಕೇಜ್‌ಗಳನ್ನು ನೀಡಲು ಸರಕಾರ ಸಿದ್ದವಿದೆ. ಆದರೆ ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಿ, ದುರುಪಯೋಗವಾಗುವುದನ್ನು ತಡೆದು ಸ್ಪರ್ಧಾತ್ಮಕತೆಯನ್ನು ರೂಢಿಸಿಕೊಂಡಲ್ಲಿ ಏರ್‌ಇಂಡಿಯಾ ವೈಭವ ಮರಳಲಿದೆ ಎಂದು ಪ್ರಧಾನಿ ಅಭಿಪ್ರಾಯಪಟ್ಟರು. ಪ್ರಧಾನಿ ನಮನಮೋಹನ್ ಸಿಂಗ್ ಅವರೊಂದಿಗೆ ಚರ್ಚಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನಾಗರಿಕ ವಿಮಾನಯಾನ ಸಚಿವ ಪ್ರಫುಲ್ ಪಟೇಲ್ ,ಸರಕಾರ ಸಂಪುಟ ಕಾರ್ಯದರ್ಶಿಗಳ ನೇತೃತ್ವದಲ್ಲಿ ಆರ್ಥಿಕ ಇಲಾಖೆ ಕಾರ್ಯದರ್ಶಿ ,ವಿಮಾನಯಾನ ಮತ್ತು ಪ್ರಧಾನಿಯವರ ಪ್ರಧಾನ ಕಾರ್ಯದರ್ಶಿ ಸೇರಿದಂತೆ ನಾಲ್ಕು ಮಂದಿ ಅಧಿಕಾರಿಗಳ ತಂಡವನ್ನು ರಚಿಸಲಾಗಿದೆ ಎಂದು ಹೇಳಿದ್ದಾರೆ. ಏರ್‌ಇಂಡಿಯಾ ಕಾರ್ಯವೈಖರಿಯಲ್ಲಿ ಬದಲಾವಣೆ ಮತ್ತು ಶೇರುಗಳ ಆಧಾರದ ಮೇಲೆ ಅಗತ್ಯವಾದ ಸಾಲದ ವಿವರಗಳನ್ನು ಒಂದು ತಿಂಗಳೊಳಗಾಗಿ ಸರಕಾರಕ್ಕೆ ಸಲ್ಲಿಸುವುದು ಅಗತ್ಯವಾಗಿದೆ. ಏರ್‌ಇಂಡಿಯಾ ನಷ್ಟದಿಂದ ಚೇತರಿಸಿಕೊಳ್ಳಲು ಅಗತ್ಯವಾದ ಕ್ರಮಗಳನ್ನು ತೆಗೆದುಕೊಳ್ಳದಿದ್ದಲ್ಲಿ, ಸರಕಾರ ನಿರಂತರ ಬೆಂಬಲ ನೀಡುವುದು ಅಸಾಧ್ಯ. ಇದೊಂದು ಬಾರಿ ಸರಕಾರದಿಂದ ಅಂತಿಮ ಅವಕಾಶ ದೊರೆತಿದೆ ಎಂದು ಸಚಿವ ಪ್ರಫುಲ್ ಪಟೇಲ್ ಹೇಳಿದ್ದಾರೆ. |