ಸಿಡಿಎಂಎ ಮತ್ತು ಜಿಎಸ್‌ಎಂ ವಲಯಗಳಲ್ಲಿ ಸೇವೆ ಒದಗಿಸುವ ದೇಶದ ಎರಡನೇ ಮೊಬೈಲ್ ಸೇವಾ ಸಂಸ್ಥೆಯಾಗಿ ಟಾಟಾ ಟೆಲಿಸರ್ವಿಸಸ್ ಮಹತ್ವದ ಹೆಜ್ಜೆಯನ್ನಿರಿಸಿದ್ದು, ಜಪಾನ್‌ನ ಮುಂಚೂಣಿ ಟೆಲಿಕಾಂ 'ಎನ್‌ಟಿಟಿ ಡೊಕೊಮೊ' ಜತೆ ಕೈ ಜೋಡಿಸಿ 'ಟಾಟಾ ಡೊಕೊಮೊ' ಎಂಬ ಹೆಸರಿನಡಿಯಲ್ಲಿ ಜಿಎಸ್‌ಎಂ ಸೇವೆಯನ್ನು ಚೆನ್ನೈಯಲ್ಲಿ ಪ್ರಾರಂಭಿಸಿದೆ.
ಈ ಹಿಂದೆ ರಿಲಯೆನ್ಸ್ ಜಿಎಸ್‌ಎಂ ಸೇವೆಯನ್ನು ಆರಂಭಿಸುವ ಮೂಲಕ ಸಿಡಿಎಂಎ ಮತ್ತು ಜಿಎಸ್‌ಎಂ ಸೇವೆಗಳೆರಡನ್ನೂ ನೀಡುವ ದೇಶದ ಮೊತ್ತ ಮೊದಲ ಮೊಬೈಲ್ ಸೇವಾಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಆ ಸಾಲಿಗೆ ಟಾಟಾ ಕೂಡ ಇದೀಗ ಸೇರಿಕೊಂಡಿದೆ.
'ಟಾಟಾ ಡೊಕೊಮೊ' ತನ್ನ ದೇಶಾದ್ಯಂತದ ಸಂಪೂರ್ಣ ಸೇವೆಯನ್ನು ಈ ವರ್ಷಾಂತ್ಯದೊಳಗೆ ಪೂರ್ಣಗೊಳಿಸಲಿದೆ ಎಂದು ಟಾಟಾ ಟೆಲಿಸರ್ವಿಸಸ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ದೇಶದಾದ್ಯಂತ ಜಿಎಸ್‌ಎಂ ಸಂಪರ್ಕಜಾಲಕ್ಕಾಗಿ ಕಂಪನಿಯು 9,700 ಕೋಟಿ ರೂಪಾಯಿಗಳನ್ನು ಹೂಡಲಿರುವ ವಿಚಾರವನ್ನೂ ಇದೇ ಸಂದರ್ಭದಲ್ಲಿ ಕಂಪನಿ ಪ್ರಕಟಿಸಿದೆ. ಟಾಟಾ ಡೊಕೊಮೊ ಸೇವೆಯು ದೇಶದೆಲ್ಲೆಡೆ ಸುಮಾರು 20 ಸಾವಿರ ಔಟ್‌ಲೆಟ್‌ಗಳಲ್ಲಿ ಶೀಘ್ರವೇ ಲಭ್ಯವಾಗಲಿದೆ.
ಟಾಟಾ ಡೊಕೊಮೊ ಗ್ರಾಹಕರು ಇದರ ಮೌಲ್ಯಾಧರಿತ ಸೇವೆಗಳಾದ ವಾಯ್ಸ್ ಪೋರ್ಟಲ್ಸ್, ಅವಿರತ ಸಂಗೀತ, ಕ್ರಿಕೆಟ್ ವೀಕ್ಷಕ ವಿವರಣೆ, ವಾಯ್ಸ್ ಚಾಟ್ ಮುಂತಾದುವುಗಳನ್ನು ಪಡೆಯಬಹುದಾಗಿದೆ. ಅಲ್ಲದೆ ಮಿಸ್ ಕಾಲ್ ಬಗ್ಗೆ ಮಾಹಿತಿ ನೀಡುವ ಉಚಿತ ಸೇವೆಯನ್ನು ಎಲ್ಲಾ ಗ್ರಾಹಕರಿಗೂ ನೀಡುತ್ತೇವೆ ಎಂದು ಟಾಟಾ ಟೆಲಿಸರ್ವಿಸಸ್‌ನ ವ್ಯವಸ್ಥಾಪಕ ನಿರ್ದೇಶಕ ಅನಿಲ್ ಸರ್ದಾನಾ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮುಂದಿನ ಕೆಲವೇ ತಿಂಗಳುಗಳಲ್ಲಿ ಕರ್ನಾಟಕ, ಒರಿಸ್ಸಾ, ಕೇರಳಗಳಲ್ಲೂ ಜಿಎಸ್‌ಎಂ ಸೇವೆಯನ್ನು ಟಾಟಾ ಆರಂಭಿಸಲಿದೆ. ದೆಹಲಿ, ಜಮ್ಮು ಕಾಶ್ಮೀರ, ಅಸ್ಸಾಮ್ ಮತ್ತು ಈಶಾನ್ಯಗಳಲ್ಲಿ ಜಿಎಸ್‌ಎಂ ಸೇವೆಗಳನ್ನು ಬಳಸಲು ಟಾಟಾಗೆ ಅನುಮತಿ ನೀಡಲಾಗಿಲ್ಲ. ಆದರೆ ಉಳಿದೆಡೆ ತನ್ನ ಸಂಪರ್ಕಜಾಲ ವಿಸ್ತರಿಸಲು ಸರಕಾರ ಒಪ್ಪಿಗೆ ಸೂಚಿಸಿದೆ ಎಂದು ತಿಳಿದು ಬಂದಿದೆ.
|