ಅತೀ ಹಿಂದುಳಿದ 39 ವಲಯಗಳ 3,900 ಗ್ರಾಮಗಳ ಸುಮಾರು 50 ಲಕ್ಷ ಜನರಿಗೆ ಉಪಯೋಗವಾಗುವಂತೆ ಕರ್ನಾಟಕ ಸರಕಾರವು ಮಹತ್ವಾಕಾಂಕ್ಷೆಯ ಸೌರಶಕ್ತಿ ಯೋಜನೆಯೊಂದನ್ನು ರೂಪಿಸುತ್ತಿದೆ.
ಗ್ರಾಮಾಂತರ ಪ್ರದೇಶಗಳಿಗೆ ಅಗತ್ಯವಿರುವ ಸೌರಶಕ್ತಿಯನ್ನು ಮಿತದರದಲ್ಲಿ ಪೂರೈಕೆ ಮಾಡಲು ಸೌರಶಕ್ತಿ ಪೂರೈಕೆದಾರ ಬಿಡ್ ಕೂಡ ಕರ್ನಾಟಕ ಪುನರ್ಬಳಕೆಯ ಇಂಧನ ಅಭಿವೃದ್ಧಿ ನಿಗಮವು ಕರೆದಿದೆ. ಯೋಜನೆ, ಹಣಕಾಸು, ಉತ್ಪಾದನೆ, ಕಾರ್ಯನಿರ್ವಹಣೆ ಮತ್ತು ಸೋಲಾರ್/ಹೈಬ್ರಿಡ್ ವಿದ್ಯುತ್ ಸ್ಥಾವರ ನಿರ್ವಹಣೆ ಸೇರಿದಂತೆ ಬಳಕೆದಾರರಿಂದ ಶುಲ್ಕ ಸಂಗ್ರಹಿಸುವ ಉದ್ದೇಶವನ್ನಿಟ್ಟುಕೊಂಡು ಈ ಟೆಂಡರ್ ಕರೆಯಲಾಗಿದೆ.
ಸ್ಥಳೀಯ ಸಣ್ಣ ಪ್ರಮಾಣದ ವಿದ್ಯುತ್ ವಾಹಕಗಳು ಅಥವಾ ಏಕೀಕೃತ ವಾಹಕ ಅಥವಾ ಪೂರಣ ಕೇಂದ್ರಗಳ ಮೂಲಕ ವಿದ್ಯುತ್‌ಚಾಲಿತ ಸಲಕರಣೆಗಳನ್ನು ಬಳಕೆದಾರರು ಚಾರ್ಜ್ ಮಾಡಿಕೊಳ್ಳುವ ವ್ಯವಸ್ಥೆಗಳನ್ನು ಈ ಸ್ಥಾವರಗಳು ಒದಗಿಸಲಿವೆ. ಬೀದಿ ದೀಪಗಳು, ಗೃಹಬಳಕೆ, ಮನರಂಜನೆ/ಶೈಕ್ಷಣಿಕ ಉಪಯೋಗ, ನೀರಾವರಿ, ಕುಡಿಯುವ ನೀರಿನ ಪೂರೈಕೆ, ಶುದ್ಧೀಕರಣ/ಲವಣಮುಕ್ತ ಸ್ಥಾವರ, ಫ್ಲೋರಿನ್‌ಮುಕ್ತತೆ, ಪಾಶ್ಚೀಕರಣ ಮತ್ತು ಗುಡಿ ಕೈಗಾರಿಕೆಗಳಿಗೆ ಈ ಸೌರಶಕ್ತಿಯನ್ನು ಒದಗಿಸಲಾಗುತ್ತದೆ.
ಸೌರಶಕ್ತಿ ವಿದ್ಯುತ್ತನ್ನು ಮೀಟರ್ ಮೂಲಕ ಮಾಪನ ಮಾಡಲಾಗುತ್ತದೆ ಮತ್ತು ಮುಂಗಡ ಪಾವತಿಯ ಮೂಲಕ ಸೌರಶಕ್ತಿ ಲಭ್ಯವಾಗುವಂತೆ ನೋಡಿಕೊಳ್ಳಲಾಗುತ್ತದೆ. ನಾವೀಗ ಗುರುತಿಸಿರುವ ಬಹುತೇಕ ಗ್ರಾಮಗಳಲ್ಲಿ ವಿದ್ಯುತ್ ಸೌಲಭ್ಯಗಳಿಲ್ಲ. ಇದ್ದರೂ ವೋಲ್ಟೇಜ್ ಸಮಸ್ಯೆಗಳನ್ನೆದುರಿಸುತ್ತಿದ್ದಾರೆ ಎಂದು ಕೆ.ಆರ್.ಇ.ಡಿ.ಎಲ್. ವ್ಯವಸ್ಥಾಪಕ ನಿರ್ದೇಶಕ ಎಚ್.ಜಿ. ಶಿವಾನಂದಮೂರ್ತಿ ತಿಳಿಸಿದ್ದಾರೆ.
ಈ ಯೋಜನೆಯನ್ನು ಸುಗಮಗೊಳಿಸುವಲ್ಲಿ ಶ್ರಮವಹಿಸುತ್ತೇವೆ. ಅತೀ ಕಡಿಮೆ ದರದಲ್ಲಿ ಜನತೆ ವಿದ್ಯುತ್ ಪಡೆಯುವುದು ನಮ್ಮ ಉದ್ದೇಶ ಎಂದು ಇದೇ ಸಂದರ್ಭದಲ್ಲಿ ಅವರು ವಿವರಿಸಿದರು.
|