ಪಾಪ್ ಲೋಕದ ಧ್ರುವತಾರೆ ಮೈಕೆಲ್ ಜಾಕ್ಸನ್ ಬದುಕಿರುವಾಗ ಬಿಲಿಯನ್ ಡಾಲರ್ ವ್ಯವಹಾರಗಳಿಗೆ ಕಾರಣನಾಗಿರಬಹುದು. ಆದರೆ ಆತ ಇಹಲೋಕ ತ್ಯಜಿಸುವಾಗ 400 ಮಿಲಿಯನ್ ಅಮೆರಿಕನ್ ಡಾಲರ್ ಸಾಲ ಉಳಿದುಕೊಂಡಿದೆ...!ಕಳೆದ ಹಲವು ದಶಕಗಳಿಂದ ಅಮೆರಿಕಾದಲ್ಲಿ 750 ಮಿಲಿಯನ್‌ಗೂ ಹೆಚ್ಚು ಆಲ್ಬಮ್ ಮಾರಾಟಕ್ಕೆ ಕಾರಣನಾಗಿದ್ದ ಜಾಕ್ಸನ್ ಸಾಯುವವರೆಗೂ ಆಕರ್ಷಣೆ ಉಳಿಸಿಕೊಂಡ ಮೇರು ವ್ಯಕ್ತಿ. ತನ್ನ ವೈಯಕ್ತಿಕ ಜೀವನದಲ್ಲಿ ಎಂತಹುದೇ ಏಳು-ಬೀಳುಗಳಿದ್ದರೂ ಅಭಿಮಾನಿಗಳಿಗೆ ಯಾವತ್ತೂ ವಂಚಿಸಿದವನಲ್ಲ.ಆತನ ಒಂದು ಆಲ್ಬಮ್ ಮಾರುಕಟ್ಟೆಗೆ ಬಂತೆಂದರೆ ಮುಗಿ ಬಿದ್ದು ಕೊಳ್ಳುವವರ ಸಂಖ್ಯೆ ಈಗಲೂ ತೀರಾ ಕಡಿಮೆಯೇನೂ ಆಗಿರಲಿಲ್ಲ. ಅದಕ್ಕೆ ಸಾಕ್ಷಿ ಆತ ಇತ್ತೀಚೆಗಷ್ಟೇ ತನ್ನ ಮುಂದಿನ ಕಾರ್ಯಕ್ರಮವನ್ನು ಘೋಷಿಸಿದ ಬೆನ್ನಲ್ಲೇ ಅದರ ಟಿಕೆಟ್‌ಗಳು ಕ್ಷಣಮಾತ್ರದಲ್ಲಿ ಖಾಲಿಯಾಗಿರುವುದು. ಆತನ ಕೀರಲು ಧ್ವನಿ, ಮೂಳೆಯಿಲ್ಲದ ದೇಹದ ಕುಣಿತಕ್ಕೆ ಜಗತ್ತಿನಾದ್ಯಂತ ಹುಚ್ಚೆದ್ದು ಕುಣಿಯುವವರಿಗೇನೂ ಕೊರತೆಯಿಲ್ಲ.ಸಾವಿರಾರು ಕೋಟಿ ಡಾಲರು ವ್ಯವಹಾರಗಳಿಗೆ ಕಾರಣನಾಗಿದ್ದ ಜಾಕ್ಸನ್ ಇತ್ತೀಚಿನ ವರ್ಷಗಳಲ್ಲಿ ತನ್ನದೇ ಆವಾಂತರಗಳಿಂದ ಆರ್ಥಿಕ ಸಂಕಷ್ಟವನ್ನೆದುರಿಸುತ್ತಿದ್ದ. ಲೈಂಗಿಕ ಕಿರುಕುಳ, ಸಲಿಂಗಕಾಮ, ಮಾದಕ ದ್ರವ್ಯ ವಿವಾದ ಮುಂತಾದುವುಗಳಿಂದ ಆತ ಜರ್ಜರಿತನಾಗಿ ಹೋಗಿದ್ದ. ಹೇಗಿದ್ದ ಪಾಪ್ ಚಕ್ರವರ್ತಿ ಹೇಗಾಗಿ ಹೋದ ಎಂಬಂತೆ ಆಸ್ಪತ್ರೆಯೇ ಆತನ ಪಾಲಿನ ರಂಗಮಂಚವಾಗಿ ಹೋಗಿತ್ತು.ಇಂತಿಪ್ಪ ಇದ್ದ-ಬದ್ದ ಆಸ್ತಿಯೆಲ್ಲಾ ಕೈ ಬಿಟ್ಟು ಹೋಗಿದ್ದು, ಸಾಯುವ ಹೊತ್ತಿನಲ್ಲಿ ಮೂಲಗಳ ಪ್ರಕಾರ ಆತನ ಹೆಸರಿನಲ್ಲಿ 400 ಮಿಲಿಯನ್ ಡಾಲರ್ ಸಾಲ ಉಳಿದು ಹೋಗಿದೆ. ಇನ್ನಷ್ಟು ಶೋಗಳನ್ನು ನಡೆಸಿ ಸಾಲ ತೀರಿಸಬೇಕೆನ್ನುವ ಜಾಕ್ಸನ್ ಆಸೆಯೂ ಈಡೇರಿಲ್ಲ. ಜುಲೈಯಲ್ಲಿ ತನ್ನ ಜೀವನದ ಕೊನೆಯ ಸಾರ್ವಜನಿಕ ಪ್ರದರ್ಶನ ನೀಡುವುದಾಗಿ ಆತ ಘೋಷಿಸಿದ್ದ. ಒಂಚೂರೂ ಕರುಣೆ ತೋರಿಸದ ದೇವರು ತಿಂಗಳ ಮೊದಲೇ ಜಾಕ್ಸನ್ ಬಡಜೀವಕ್ಕೆ ಮುಕ್ತಿ ದೊರಕಿಸಿದ್ದಾನೆ.1972 ರಲ್ಲಿ ಗಾಟ್ ಟು ಬಿ ದೇರ್, ಬೆನ್, 1973ರಲ್ಲಿ ಮ್ಯೂಸಿಕ್ ಎಂಡ್ ಮಿ, 1975ರಲ್ಲಿ ಫಾರೆವರ್ ಮೈಕೆಲ್, 1979ರಲ್ಲಿ ಆಫ್ ದಿ ವಾಲ್, 1982ರಲ್ಲಿ ಥ್ರಿಲ್ಲರ್, 1987ರಲ್ಲಿ ಬ್ಯಾಡ್, 1991ರಲ್ಲಿ ಡೇಂಜರಸ್, 1995ರಲ್ಲಿ ಹಿಸ್ಟೋರಿ, 2001ರಲ್ಲಿ ಇನ್‌ವಿನ್ಸಿಬಲ್ ಎಂಬ ಮ್ಯೂಸಿಕ್ ಆಲ್ಬಮ್‌ಗಳನ್ನು ಆತ ಹೊರ ತಂದಿದ್ದ. ಆ ಮೂಲಕ ಹಲವಾರು ಮಿಲಿಯನ್ ಡಾಲರ್‌ಗಳ ಹುಟ್ಟಿಗೆ ಆತ ಕಾರಣನಾಗಿದ್ದ. ಆತ ಹಲವು ವರ್ಷಗಳ ಮುಂಚೆಯೇ ಆಲ್ಬಮ್‌ಗಳನ್ನು ಮಾಡುತ್ತಿದ್ದರೂ ಪ್ರಚಾರಕ್ಕೆ ಬಂದಿದ್ದು 'ಥ್ರಿಲ್ಲರ್' ನಂತರ. ಆಗ ಕೇಬಲ್ ಚಾನೆಲ್ ಆಗಿದ್ದ ಎಂಟೀವಿ ಈ ಆಲ್ಬಮನ್ನು ತನ್ನ ಚಾನೆಲ್‌ನಲ್ಲಿ ಗಂಟೆಗೊಮ್ಮೆ ಪ್ರಸಾರ ಮಾಡುವ ಮೂಲಕ ಸಾಕಷ್ಟು ಲಾಭ ಮಾಡಿಕೊಂಡಿತ್ತು. ಆ ನಂತರ ಆತನ 'ಥ್ರಿಲ್ಲರ್' ದಾಖಲೆ ಪ್ರಮಾಣದಲ್ಲಿ ವ್ಯಾಪಾರವಾಯಿತು. ಎಷ್ಟೆಂದರೆ ಈಗಲೂ 'ಥ್ರಿಲ್ಲರ್' ಆಲ್ಬಮ್‌ಗಳ ಬೇಡಿಕೆ ಕುಸಿದಿಲ್ಲ. ಹಾಡುಗಳು ಟೀವಿಯಲ್ಲಿ ಬರುತ್ತಿದ್ದರೆ ಯಾರೊಬ್ಬರೂ ಕದಲದೆ ಮಾಡುವಂತಹ ತಾಕತ್ತುಳ್ಳದ್ದು.ಐದು ವರ್ಷದ ನಂತರ ಬಿಡುಗಡೆಯಾದ ಬ್ಯಾಡ್ 22 ಮಿಲಿಯನ್ ಮಾರಾಟವಾಯಿತು. 1991ರಲ್ಲಿ ಜಾಕ್ಸನ್ ಸೋನಿ ಕಂಪನಿ ಜತೆ 65 ಮಿಲಿಯನ್ ಡಾಲರ್‌ಗಳ ಒಪ್ಪಂದಕ್ಕೂ ಸಹಿ ಹಾಕಿದ್ದ. ಹಣವೆಂದರೆ ಏನೂ ಅಲ್ಲ ಎಂಬಂಥ ಪರಿಸ್ಥಿತಿ ಆತನದಾಯಿತು. ಆದರೆ ಅದು ಸ್ವಲ್ಪವೇ ದಿನಗಳಿಗೆ ಸೀಮಿತವಾಗಿ ಹೋದದ್ದು ಮಾತ್ರ ದುರಂತ.ಆತ ಜನಪ್ರಿಯನಾಗುತ್ತಾ ಹೋದಂತೆ ಮತ್ತೊಂದು ಕಡೆಯಿಂದ ಅಥಃಪತನವೂ ಆರಂಭವಾಗಿತ್ತು. ಸಲಿಂಗಕಾಮದ ಆರೋಪ ಆತನ ಜೀವನದಲ್ಲಿ ಹಲವು ಬಾರಿ ಬಂದು ಹೋಯಿತು. ಅಂತಹ ವಿವಾದಗಳೆಲ್ಲ ಆತ ಸಾಯುವವರೆಗೂ ಮಾಮೂಲಿ ವಿಚಾರಗಳಾಗಿ ಹೋದವು. ಜತೆಗೆ ಹೆಂಡತಿಯರನ್ನು ತ್ಯಜಿಸುವುದು ಮತ್ತೊಂದು ಖಯ್ಯಾಲಿ.ಸಂಪಾದನೆ ಉತ್ತಮವಾಗಿದ್ದರೂ ಸಹ ತನ್ನ ಎರ್ರಾಬಿರ್ರಿ ವ್ಯವಹಾರಗಳಿಂದ ನಷ್ಟ ಅನುಭವಿಸಿದ ಆತ ತನ್ನದೇ ಆದ ಎಟಿವಿಯನ್ನು ಸೋನಿ ಕಂಪನಿ ಜತೆ ಮರ್ಜ್ ಮಾಡಿಬಿಟ್ಟ. ಅದೂ ಸಾಲದ ಒತ್ತಡದಿಂದಾಗಿ. ಕೊನೆಗೆ ಬ್ಯಾಂಕ್ ಆಫ್ ಅಮೆರಿಕಾದಿಂದ 200 ಮಿಲಿಯನ್ ಡಾಲರ್ ಸಾಲವನ್ನೂ ಆತ ಪಡೆಯಬೇಕಾಯಿತು. ಇನ್ನಿತರ ಬ್ಯಾಂಕುಗಳಿಂದ ಮಾಡಿದ ಸಾಲಗಳೂ ಹಾಗೆಯೇ ಉಳಿದುಕೊಂಡಿದೆ.ಮತ್ತೊಂದು ಕಡೆಯಿಂದ ಕಾನೂನಿನ ಕುಣಿಕೆಗೆ ಸಿಲುಕಿದ ಆತ ಸಾಕಷ್ಟು ಪರಿಹಾರಗಳನ್ನು ನೀಡಲು ಹೋಗಿ ಅಲ್ಲೂ ಎಲ್ಲವನ್ನೂ ಕಳೆದುಕೊಂಡ. ಕೆಲವು ಪ್ರಕರಣಗಳನ್ನು ಕೋರ್ಟಿನಿಂದ ಹೊರಗೆ ಮುಗಿಸುವ ಧಾವಂತಕ್ಕೆ ಬಿದ್ದು ಮಿಲಿಯನ್‌ಗಟ್ಟಲೆ ಪೋಲು ಮಾಡಿದ. ಸಾಯುವ ಹೊತ್ತಿಗೆ ಆತನ ಪರಿಸ್ಥಿತಿ ಹೇಗಿತ್ತೆಂದರೆ ಮನೆಯನ್ನು ಅಡವಿಡುವಷ್ಟು. ಹಲವಾರು ವರ್ಷಗಳಿಂದ ಆತನ ಕುಟುಂಬ ವಾಸಿಸುತ್ತಿದ್ದ ಮನೆಯನ್ನೇ ಆತ ಅಡವಿಗೆ ಹಾಕಿದ್ದ. ಅದರ ಪಾವತಿಯನ್ನೂ ಸರಿಯಾದ ಸಮಯದಲ್ಲಿ ಮಾಡಲು ಸಾಧ್ಯವಾಗಿರಲಿಲ್ಲ. ಇದೇ ಉದ್ದೇಶದಿಂದ 2009ರ ಜುಲೈ 13ರಿಂದ ಮತ್ತೆ ತನ್ನ ಪ್ರದರ್ಶನ ಆರಂಭಿಸುವುದಾಗಿ ಪತ್ರಿಕಾಗೋಷ್ಠಿ ಕರೆದು ಹೇಳಿದ್ದ. ಇದೇ ತನ್ನ ಕೊನೆಯ ಸಾರ್ವಜನಿಕ ಪ್ರದರ್ಶನವೂ ಆಗಿರಬಹುದು ಎಂಬುದೊಂದು ಸಣ್ಣ ಸುಳಿವನ್ನೂ ನೀಡಿದ್ದ.ಅದಕ್ಕಿಂತ ಮೊದಲೇ ಆತ ಹೊರಟೇ ಹೋಗಿದ್ದಾನೆ -- ಅವನ ಕುಟುಂಬ ತೀರಿಸಲಾಗದಷ್ಟು ಮಿಲಿಯನ್‌ಗಟ್ಟಲೆ ಸಾಲಗಳನ್ನು ಬಾಕಿ ಉಳಿಸಿ. ಜತೆಗೆ ಮುಂದಿನ ಶೋ ಹಣವನ್ನೂ ಮುಂಗಡ ಪಡೆದುಕೊಂಡು. |