ಜಾಗತಿಕ ಆರ್ಥಿಕ ಹಿಂಜರಿತವನ್ನು ಅರ್ಥೈಸಿಕೊಂಡಿರುವ ಮೈಕ್ರೋಸಾಫ್ಟ್ ಕಾರ್ಪೊರೇಷನ್ ತನ್ನ 'ವಿಂಡೋಸ್ 7' ಹೊಸ ಅಪರೇಟಿಂಗ್ ಸಿಸ್ಟಂನ ಸ್ಟಾಂಡರ್ಡ್ ಹೋಮ್ ಆವೃತ್ತಿಯನ್ನು ಈ ಹಿಂದಿನ 'ವಿಸ್ತಾ' ಅಪರೇಟಿಂಗ್ ಸಿಸ್ಟಂಗಿಂತ ಶೇಕಡಾ 8ರಷ್ಟು ಕಡಿಮೆ ಬೆಲೆಗೆ ಮಾರಲಿದೆ.
ದುಬಾರಿ ಆಪಲ್ ಐಎನ್‌ಸಿ ಕಂಪ್ಯೂಟರ್ಸ್‌ಗೆ ಪೈಪೋಟಿ ನೀಡುವಲ್ಲಿ ಮಹತ್ವದ ಪಾತ್ರವಹಿಸುತ್ತಿರುವ ವಿಶ್ವದ ಸಾಫ್ಟ್‌ವೇರ್ ದೈತ್ಯ ಸಂಸ್ಥೆ ಮೈಕ್ರೋಸಾಫ್ಟ್ ತಾನು ಮುಂದಿನ ಕೆಲವೇ ದಿನಗಳಲ್ಲಿ ಹೊಸ ಆವೃತ್ತಿಯನ್ನು ಕಡಿಮೆ ಬೆಲೆಗೆ ಕೊಡುವುದಾಗಿ ಹೇಳಿಕೊಂಡಿದೆ. ಇದು ಗ್ರಾಹಕರಿಗೆ ತೀರಾ ಕೈಗೆಟುಕುವಂತಿರುತ್ತದೆ ಎನ್ನವುದು ಕಂಪನಿಯ ಹೇಳಿಕೆ.
'ವಿಸ್ತಾ'ಕ್ಕೆ ಸಿಕ್ಕ ಪ್ರತಿಕ್ರಿಯೆಯಿಂದ ನಿರಾಸೆಗೊಂಡಿರುವ ಮೈಕ್ರೋಸಾಫ್ಟ್ ಇದೀಗ 'ವಿಂಡೋಸ್ 7'ನಲ್ಲಿ ಬೃಹತ್ ಯಶಸ್ಸು ಕಾಣುವ ನಿರೀಕ್ಷೆಯಲ್ಲಿದೆ. ಈ ಅಪರೇಟಿಂಗ್ ಸಿಸ್ಟಂ ಅಧಿಕೃತವಾಗಿ ಅಕ್ಟೋಬರ್ 22ರಂದು ಬಿಡುಗಡೆಯಾಗಲಿದೆ. ಆದರೆ ಅದಕ್ಕಿಂತ ಮೊದಲೇ ಅಮೆರಿಕಾದ ಬೆಸ್ಟ್ ಬೈ ಕೋ ಐಎನ್‌ಸಿ, ಅಮೇಜಾನ್.ಕಾಮ್ ಐಎನ್‌ಸಿ ಮತ್ತು ಕಂಪನಿಯ ಸ್ವಂತ ವೆಬ್‌ಸೈಟ್‌ನಲ್ಲಿ ಬುಕ್ಕಿಂಗ್ ಸೌಲಭ್ಯವನ್ನು ಒದಗಿಸಲಾಗುತ್ತಿದೆ.
ಅದೇ ಹೊತ್ತಿಗೆ ಕಂಪ್ಯೂಟರ್ ತಯಾರಕರುಗಳಾದ ಹೆಲ್ವೆಟ್ ಪಾಕಾರ್ಡ್, ಡೆಲ್, ಏಸರ್ ಸೇರಿದಂತೆ ಹಲವು ಕಂಪನಿಗಳಿಗೆ ಮೈಕ್ರೋಸಾಫ್ಟ್ ಎಷ್ಟು ದರ ವಿಧಿಸಲಿದೆ ಎಂಬುದನ್ನು ಇದುವರೆಗೂ ಬಹಿರಂಗಪಡಿಸಿಲ್ಲ. ವಿಂಡೋಸ್ 7ನ್ನು ಕಂಪ್ಯೂಟರ್‌ಗಳಲ್ಲಿ ಮೊದಲೇ ಸ್ಥಾಪಿಸಿ ನಂತರ ಮಾರಾಟ ಮಾಡುವ ವಿಧಾನಕ್ಕೆ ಮೈಕ್ರೋಸಾಫ್ಟ್ ಕೂಡ ಪ್ರಬಲವಾಗಿ ಸ್ಪಂದಿಸುತ್ತಿದೆ ಎನ್ನಲಾಗಿದೆ.
ಅಮೆರಿಕಾದಲ್ಲಿ ಈಗಾಗಲೇ ವಿಂಡೋಸ್ ಬಳಸುತ್ತಿರುವ ವ್ಯವಹಾರಸ್ಥರಲ್ಲದ ಗ್ರಾಹಕರಿಗೆ ವಿಂಡೋಸ್ 7ನ ಅಪ್‌ಗ್ರೇಡ್ ಹೋಮ್ ಪ್ರೀಮಿಯಮ್ ಆವೃತ್ತಿಯನ್ನು ಜೂನ್ 26ರಿಂದ ಜುಲೈ 11ರವರೆಗೆ ತಾನು ಮಾರಾಟ ಮಾಡುವುದಾಗಿ ತಿಳಿಸಿರುವ ಕಂಪನಿ, 49.99 ಡಾಲರ್ ಶುಲ್ಕವನ್ನು ವಿಧಿಸಲಿದೆ. ಆದರೆ ಸಾಫ್ಟ್‌ವೇರ್ ಕಳುಹಿಸಿಕೊಡುವುದು ಅಕ್ಟೋಬರ್‌ನಲ್ಲಿ ಬಿಡುಗಡೆಯಾದ ನಂತರ.
ವಿಸ್ತಾವನ್ನು 2007ರಲ್ಲಿ ಬಿಡುಗಡೆ ಮಾಡಿದಾಗ 159.99 ಡಾಲರ್ ವಿಧಿಸಲಾಗುತ್ತಿತ್ತು. ನಂತರ ಅದನ್ನು 129.99 ಡಾಲರುಗಳಿಗೆ ಇಳಿಸಲಾಯಿತು. ಇದೀಗ ವಿಂಡೋಸ್ 7ನ್ನು ಜುಲೈ 11ರ ನಂತರ 119.99 ಡಾಲರುಗಳಿಗೆ ಬುಕ್ಕಿಂಗ್ ಮಾಡಬಹುದು ಎಂದು ಮೈಕ್ರೋಸಾಫ್ಟ್ ಪ್ರಕಟಿಸಿದೆ.
ಸಣ್ಣ ಕಂಪನಿಗಳ ಗ್ರಾಹಕರನ್ನು ಗುರಿಯಾಗಿರಿಸಿಕೊಂಡಿರುವ ವಿಂಡೋಸ್ 7ನ ಪ್ರೊಫೆಷನಲ್ ಅಪ್‌ಗ್ರೇಡ್ ಆವೃತ್ತಿಯನ್ನು ಜುಲೈ 11ರವರೆಗೆ 99.99 ಡಾಲರುಗಳಿಗೆ ಮಾರಲಿದೆ. ನಂತರ ಅದೇ ಆವೃತ್ತಿಗೆ 199.99 ಡಾಲರುಗಳನ್ನು ವಿಧಿಸಲಾಗುತ್ತದೆ.
|