ಜಾಗತಿಕ ಬದಲಾವಣೆಗಳಿಗೆ ಹೊಂದಿಕೊಳ್ಳುತ್ತಿರುವ ಚಿನಿವಾರ ಪೇಟೆಯು ಶುಕ್ರವಾರದ ವ್ಯವಹಾರದಲ್ಲಿ ಚೇತರಿಕೆ ಕಂಡಿದ್ದು, ಚಿನ್ನದಲ್ಲಿ 30 ಹಾಗೂ ಬೆಳ್ಳಿಯಲ್ಲಿ 200 ರೂಪಾಯಿಗಳ ಏರಿಕೆಯಾಗಿದೆ.
ಪ್ರತಿ 10 ಗ್ರಾಂಗೆ 30 ರೂಪಾಯಿಗಳ ಏರಿಕೆಯೊಂದಿಗೆ 14,920ನ್ನು ಚಿನ್ನ ತಲುಪಿದ್ದರೆ, ಕೆ.ಜಿ.ಯೊಂದಕ್ಕೆ 200 ರೂಪಾಯಿಗಳ ಏರಿಕೆ ಕಂಡು ಬೆಳ್ಳಿ ದರ 22,700ನ್ನು ಮುಟ್ಟಿದೆ.
ದುರ್ಬಲವಾಗುತ್ತಿರುವ ಡಾಲರ್‌ನಿಂದಾಗಿ ಮತ್ತು ಅಮೆರಿಕಾದ ದಾಖಲೆಯ ಬಡ್ಡಿದರ ಕಡಿತಗೊಳಿಸುವ ನಿರೀಕ್ಷೆಗಳಿಂದಾಗಿ ಲೋಹಗಳತ್ತ ಪರ್ಯಾಯ ಹೂಡಿಕೆಗಾಗಿ ಆಕರ್ಷಣೆ ಹೆಚ್ಚುತ್ತಿದೆ. ಇದೇ ಕಾರಣದಿಂದ ಲಂಡನ್‌ನಲ್ಲಿ ಸತತ ನಾಲ್ಕನೇ ದಿನವೂ ಚಿನ್ನದ ಬೆಲೆಯೇರಿಕೆ ದಾಖಲಾಗಿದೆ.
ಕಳೆದ ದಿನದ ವ್ಯವಹಾರದಲ್ಲಿ ಸ್ಟಾಂಡರ್ಡ್ ಚಿನ್ನ ಮತ್ತು ಆಭರಣಗಳು 330 ರೂಪಾಯಿಗಳ ಏರಿಕೆ ಕಂಡಿದ್ದವು. ನಂತರ ಪ್ರತೀ 10 ಗ್ರಾಂಗಳಿಗೆ 30 ರೂಪಾಯಿಗಳ ಏರಿಕೆಯೊಂದಿಗೆ ಕ್ರಮವಾಗಿ 14,920 ಮತ್ತು 14,770 ರೂಪಾಯಿಗಳನ್ನು ತಲುಪಿದೆ. ಒಂದು ಪವನಿಗೆ 50 ರೂಪಾಯಿಯಂತೆ ಏರಿಕೆ ಕಂಡ ಕಾರಣ ಎಂಟು ಗ್ರಾಂ ಚಿನ್ನದ ಬೆಲೆ 12,400 ರೂಪಾಯಿಗಳನ್ನು ತಲುಪಿದಂತಾಗಿದೆ.
ಬೆಳ್ಳಿ ದರವು ಪ್ರತಿ ಕಿಲೋವೊಂದಕ್ಕೆ 200 ರೂಪಾಯಿಗಳ ಏರಿಕೆ ಕಂಡು 22,700 ರೂಪಾಯಿಗಳನ್ನು ಮುಟ್ಟಿದೆ. ವಾರದ ವಿತರಣೆ ಲೆಕ್ಕಾಚಾರದ ಪ್ರಕಾರ ಪ್ರತೀ ಕಿಲೋ ಬೆಳ್ಳಿಗೆ 22,685 ರೂಪಾಯಿಗಳು. ಆದರೆ ಬೆಳ್ಳಿಯ 100 ನಾಣ್ಯಗಳ ಖರೀದಿಗೆ 29,100 ರೂಪಾಯಿಗಳು ಹಾಗೂ ಮಾರಾಟಕ್ಕೆ 29,200 ರೂಪಾಯಿಗಳು ಚಾಲ್ತಿಯಲ್ಲಿವೆ.
|