ರಾಷ್ಟ್ರೀಯ ಗುರುತಿನ ಚೀಟಿ ವಿತರಣೆ ಯೋಜನೆ ಅಧ್ಯಕ್ಷರಾಗಿ ನಂದನ್ ನೀಲೇಕಣಿ ನೇಮಕಾದ ನಂತರ ಖಾಲಿಯಾದ ಇನ್‌ಫೋಸಿಸ್ ಸ್ಥಾನವನ್ನು ಯಾರು ತುಂಬಲಿದ್ದಾರೆ ಎಂದು ಕಂಪನಿ ಇದುವರೆಗೂ ಹೇಳಿಕೊಂಡಿಲ್ಲ.
ಆದರೆ ಅದೊಂದು ನಾಜೂಕಾದ ವ್ಯವಹಾರವಾಗಿದ್ದು, ಈ ಹಿಂದೆ ಸಂಸ್ಥೆಯು ನಾಯಕತ್ವದ ಕುರಿತು ನಡೆದುಕೊಂಡಂತೆ ಪ್ರಸಕ್ತ ನಡೆದುಕೊಳ್ಳಲಿದೆ ಎಂದು ಕಂಪನಿ ತಿಳಿಸಿದೆ.
"ನೀಲೇಕಣಿಯವರ ಖಾಲಿಯಾದ ಹುದ್ದೆಯ ಬಗ್ಗೆ ಈಗ ಯಾವುದೇ ಚರ್ಚೆಗಳು ನಡೆಯುತ್ತಿಲ್ಲ" ಎಂದು ಇನ್‌ಫೋಸಿಸ್ ವಕ್ತಾರರು ಪ್ರತಿಕ್ರಿಯೆ ನೀಡಿದ್ದಾರೆ.
ಉದ್ಯಮ ಮೂಲಗಳ ಪ್ರಕಾರ ನೀಲೇಕಣಿಯವರ ಜಾಗಕ್ಕೆ ಎಚ್.ಆರ್. ಮುಖ್ಯಸ್ಥ ಹಾಗೂ ಮಂಡಳಿ ಸದಸ್ಯ ಮೋಹನದಾಸ್ ಪೈಯವರು ಬರುವ ಸಾಧ್ಯತೆಗಳಿವೆ. ಆದರೆ ಈ ಬಗ್ಗೆ ಪ್ರಶ್ನಿಸಿದಾಗ ಯಾವುದೇ ಪ್ರತಿಕ್ರಿಯೆ ನೀಡಲು ಕಂಪನಿ ನಿರಾಕರಿಸಿದೆ.
"ಇಲ್ಲಿ ಎರಡು ವಿಚಾರಗಳಿವೆ. ಮೊದಲನೆಯದಾಗಿ ನೀಲೇಕಣಿಯವರು ಮಂಡಳಿಯ ಸದಸ್ಯನಾಗಿ ರಾಜಿನಾಮೆ ಸಲ್ಲಿಸಿದ್ದಾರೆ. ಈಗ ಅವರ ಜಾಗವನ್ನು ತುಂಬುವ ಅಗತ್ಯವಿದೆಯೇ ಎಂಬುದನ್ನು ಮಂಡಳಿಯು ನಿರ್ಧರಿಸಬೇಕಿದೆ. ಈ ಬಗ್ಗೆ ಇನ್ನೂ ಯಾವುದೇ ಮಾತುಕತೆಗಳು ನಡೆದಿಲ್ಲ" ಎಂದು ಇನ್‌ಫೋಸಿಸ್ ಸಿಇಓ ಕ್ರಿಸ್ ಗೋಪಾಲಕೃಷ್ಣನ್ ಖಾಸಗಿ ವಾಹಿನಿಯೊಂದರ ಜತೆ ಮಾತನಾಡುತ್ತಾ ತಿಳಿಸಿದರು.
"ಅವರ ಕಾರ್ಯನಿರ್ವಾಹಕಧಿಕಾರಿ ಜವಾಬ್ದಾರಿಯನ್ನು ಬೇರೆಯವರು ವಹಿಸಿಕೊಳ್ಳಬಹುದಾಗಿದೆ. ಅದಕ್ಕೆ ಬೇಕಾದಂತೆ ನಮ್ಮಲ್ಲಿ ಸಮರ್ಥ ನಾಯಕತ್ವವಿದೆ. ಈ ಹಿಂದೆ ಮಾಡಿದಂತೆ ಯಾವುದೇ ರೀತಿಯಲ್ಲಿ ಗೊಂದಲವಾಗದಂತೆ ಇನ್‌ಫೋಸಿಸ್ ಅದನ್ನು ನಿಭಾಯಿಸಲಿದೆ" ಎಂದು ಅವರು ವಿವರಿಸಿದ್ದಾರೆ.
ಇನ್‌ಫೋಸಿಸ್‌ಗೆ ನಾಯಕತ್ವ ವರ್ಗಾವಣೆ ಕುರಿತು ಯಾವುದೇ ತೊಂದರೆಗಳು ಎದುರಾಗದು ಎಂದು ವಿಶ್ಲೇಷಕರು ಕೂಡ ಅಭಿಪ್ರಾಯಪಟ್ಟಿದ್ದಾರೆ. ನಾರಾಯಣ ಮೂರ್ತಿಯವರಿಂದ ಹಿಡಿದು ನೀಲೇಕಣಿ ಈಗ ಕ್ರಿಸ್, ಹೀಗೆ ಎಲ್ಲರದ್ದೂ ಪಾರದರ್ಶಕ ವ್ಯವಹಾರ ಎಂದು ಅವರು ಬೊಟ್ಟು ಮಾಡಿದ್ದಾರೆ.
ನೀಲೇಕಣಿಯವರು ಗುರುವಾರ ಇನ್‌ಫೋಸಿಸ್‌ನ ಸಹ-ಸಂಸ್ಥಾಪಕ ಹಾಗೂ ಮಂಡಳಿಯ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದ್ದರು. ಮಂಡಳಿ ಕೂಡ ಅವರ ರಾಜಿನಾಮೆಯನ್ನು ಅಂಗೀಕರಿಸಿತ್ತು.
|