ನಂಬಿದ್ರೆ ನಂಬಿ ಬಿಟ್ರೆ ಬಿಡಿ. ಗುಜರಾತ್‌ನಲ್ಲಿ ಕೇವಲ 1,900 ಮತ್ತು 6,500 ರೂಪಾಯಿಗಳಿಗೆ ಕಂಪ್ಯೂಟರ್ ಮಾರಲಾಗುತ್ತಿದೆ. ಇದರಲ್ಲೇನೂ ಬೋಗಸ್ ಇಲ್ಲ. ಯಾಕಂದ್ರೆ ಡೆಸ್ಕ್‌ಟಾಪ್‌ಗಳನ್ನು ಮಾರುತ್ತಿರುವುದು ಸರಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್..!
ಚೆನ್ನೈ ಮೂಲದ 'ನೋವಾಟಿಯಮ್ ಸೊಲ್ಯೂಷನ್ಸ್' ಎಂಬ ಕಂಪನಿಯು ತಯಾರಿಸಿದ ಕಂಪ್ಯೂಟರ್‌ಗಳನ್ನು ಗುಜರಾತ್‌ನಲ್ಲಿ ಬಿಎಸ್‌ಎನ್‌ಎಲ್ ಮೂಲಕ ಮಾರಲಾಗುತ್ತಿದೆ.
ಭಾರತ ಸಂಚಾರ ನಿಗಮ ಮಂಡಳಿ ಮತ್ತು ನೋವಾಟಿಯಮ್ ಸೊಲ್ಯೂಷನ್ಸ್ ಪ್ರಕಾರ ಇದೇ ದೇಶದ ಅತೀ ಅಗ್ಗದ ಕಂಪ್ಯೂಟರ್. ಕಂಪನಿಯು ಈ ಡೆಸ್ಕ್‌ಟಾಪನ್ನು ಗ್ರಾಮಾಂತರ ಪ್ರದೇಶಗಳಲ್ಲಿ 1,900 ಹಾಗೂ ನಗರ ಪ್ರದೇಶಗಳಲ್ಲಿ 6,500 ರೂಪಾಯಿಗಳಿಗೆ ಮಾರುತ್ತಿದೆ.
"ಗ್ರಾಮಾಂತರ ಪ್ರದೇಶಗಳಲ್ಲಿ ಮುಂಗಡ ಹಣ ಕೊಟ್ಟವರಿಗೆ ನಾವು 15 ಇಂಚಿನ ಸಿಆರ್‌ಟಿ ಮಾನಿಟರ್, ಕೀಬೋರ್ಡ್ ಮತ್ತು ಮೌಸ್ ಹೊಂದಿದ ಈ ಡೆಸ್ಕ್‌ಟಾಪನ್ನು 1,900 ರೂಪಾಯಿಗಳಿಗೆ ಮಾರುತ್ತಿದ್ದೇವೆ. ಈ ರೀತಿ ನಾವು ರಿಯಾಯಿತಿ ದರದಲ್ಲಿ ಹಳ್ಳಿ ಪ್ರದೇಶಗಳಲ್ಲಿ ಕಂಪ್ಯೂಟರ್‌ಗಳನ್ನು ಮಾರಲು ಭಾರತ ಸರಕಾರದ ದೂರವಾಣಿ ಇಲಾಖೆಯಿಂದ 4,500 ರೂಪಾಯಿ ಸಹಾಯಧನವನ್ನು ಪಡೆಯುತ್ತೇವೆ" ಎಂದು ನೋವಾಟಿಯಮ್ ಸೊಲ್ಯೂಷನ್ಸ್ ಪ್ರಧಾನ ವ್ಯವಸ್ಥಾಪಕ ಪ್ರವೀಣ್ ದ್ವಿವೇದಿ ತಿಳಿಸಿದ್ದಾರೆ.
ಇದೇ ಕಂಪ್ಯೂಟರ್‌ಗಳನ್ನು ಅಹಮದಾಬಾದ್ ಮತ್ತು ನಗರ ಪ್ರದೇಶಗಳಲ್ಲಿ ಮಾರಾಟ ಮಾಡುವಾಗ 6,500 ರೂಪಾಯಿಗಳನ್ನು ವಿಧಿಸಲಾಗತ್ತದೆ. ಮಾನಿಟರ್ ರಹಿತವಾಗಿ ಬೇಕಾದವರಿಗೆ 3,000 ರೂಪಾಯಿಗಳಿಗೆ ಮಾರುತ್ತಾರೆ. ಮಾನಿಟರ್ ಅಗತ್ಯವಿದ್ದವರಿಗೆ 3,500 ರೂಪಾಯಿಗಳನ್ನು ಹೆಚ್ಚುವರಿಯಾಗಿ ನೀಡಿ ಪಡೆದುಕೊಳ್ಳಬಹುದಾಗಿದೆ.
ಇದರ ಜತೆಗೆ ಬಿಎಸ್‌ಎನ್‌ಎಲ್ ಬ್ರಾಡ್‌ಬ್ಯಾಂಡ್ ಸೇವೆಯನ್ನೂ ನೀಡಲಾಗುತ್ತದೆ. ಆದರೆ ಇದು ಉಚಿತವಲ್ಲ. ಗ್ರಾಮಾಂತರ ಮತ್ತು ನಗರ ಪ್ರದೇಶಗಳ ಗ್ರಾಹಕರಿಗೆ ಪ್ರತಿ ತಿಂಗಳಿಗೆ 300 ರೂಪಾಯಿಗಳಂತೆ ಸೇವಾಶುಲ್ಕ ವಸೂಲಿ ಮಾಡಲಾಗುತ್ತದೆ.
ದೇಶದ ಕೆಲವು ಭಾಗಗಳಲ್ಲಿ ಇಂತಹ 5,000 ಕಂಪ್ಯೂಟರ್‌ಗಳನ್ನು ಮಾರಾಟ ಮಾಡಲಾಗಿದೆ. ಗುಜರಾತ್‌ನಲ್ಲೇ 50,000 ಕಂಪ್ಯೂಟರ್‌ಗಳನ್ನು ಮಾರುವ ಯೋಜನೆ ಕಂಪನಿಗಳದ್ದು. ಮಾರ್ಚ್ 2010ರೊಳಗೆ ಎರಡು ಲಕ್ಷವನ್ನು ತಲುಪುವ ಗುರಿಯನ್ನೂ ಕಂಪನಿ ಹೊಂದಿದೆ.
ಕಂಪ್ಯೂಟರ್‌ನಲ್ಲಿ ಏನೆಲ್ಲಾ ಇರುತ್ತದೆ?
512 ಎಂಬಿ ರ‌್ಯಾಮ್ ಹೊಂದಿರುತ್ತದೆ. ಈ ಕಂಪ್ಯೂಟರ್ ನೆಟ್‌ವರ್ಕ್‌ನಲ್ಲಿ ಕಾರ್ಯನಿರ್ವಹಿಸುವ ಕಾರಣ ಹಾರ್ಡ್ ಡಿಸ್ಕ್ ಇರುವುದಿಲ್ಲ. ಸಾಫ್ಟ್‌ವೇರ್‌ಗಳು ಕೂಡ ಇದರಲ್ಲಿ ಉಚಿತವಾಗಿ ಬಂದಿರುತ್ತದೆ.
ಇಂಟೆಲ್ ಅಟಾಮ್ ಪ್ರೊಸೆಸಸ್ ಇದರ ವಿಶೇಷತೆಗಳಲ್ಲೊಂದು. ಜೊತೆಗೆ ಆರು ಯುಎಸ್‌ಬಿ ಪೋರ್ಟ್‌ಗಳಿರುತ್ತವೆ. ಅದರಲ್ಲಿ ಎರಡನ್ನು ಕೀಬೋರ್ಡ್ ಮತ್ತು ಮೌಸ್ ಬಳಸಿಕೊಂಡರೆ ಉಳಿದ ನಾಲ್ಕನ್ನು ಇತರ ಉಪಯೋಗಗಳಿಗಾಗಿ ಬಳಸಿಕೊಳ್ಳಬಹುದು. ಅದರಲ್ಲಿ ಬಾಹ್ಯ ಹಾರ್ಡ್‌ಡಿಸ್ಕ್, ಪೆನ್ ಡ್ರೈವ್ ಅಥವಾ ಇನ್ನಿತರ ಸ್ಟೋರೇಜ್ ಡಿವೈಸ್‌ಗಳ ವ್ಯವಸ್ಥೆಗಳನ್ನು ಬಳಸಿಕೊಳ್ಳಬಹುದಾಗಿದೆ.
ಈ ಕಂಪ್ಯೂಟರ್ ಮಲ್ಟಿಪಲ್ ಅಪರೇಟಿಂಗ್ ಸಿಸ್ಟಂ ಹೊಂದಿದೆ. ಮೈಕ್ರೋಸಾಫ್ಟ್ ವಿಂಡೋಸ್, ಲಿನಕ್ಸ್ ಮತ್ತು ಸೋಲಾರೀಸ್‌ಗಳನ್ನು ಬಳಸಬಹುದಾಗಿದೆ. ಅಲ್ಲದೆ ಮೈಕ್ರೋಸಾಫ್ಟ್ ಆಫೀಸ್, ಗೇಮ್ಸ್, ವಾಯ್ಸ್ ಮತ್ತು ವಿಡಿಯೋ ಚಾಟ್ ತಂತ್ರಾಂಶ ಕೂಡ ಒಳಗೊಂಡಿರುತ್ತದೆ.
|