ಆನೆ ಸತ್ತರೂ ಕೋಟಿ, ಬದುಕಿದರೂ ಕೋಟಿ ಎಂಬ ನಾಣ್ಣುಡಿಯಂತೆ ಮೈಕೆಲ್ ಜಾಕ್ಸನ್ ಬದುಕಿದಾಗಲೂ ಹಲವರ ಜೇಬು ತುಂಬಿಸಿದ್ದ; ಇದೀಗ ಸತ್ತಾಗಲೂ ಮೋಸ ಮಾಡಿಲ್ಲ. ಟಿಎಂಝೆಡ್, ಯಾಹೂ, ಟ್ವಿಟ್ಟರ್, ಫೇಸ್‌ಬುಕ್ ಮುಂತಾದ ಮುಂಚೂಣಿ ಸುದ್ದಿ ಹಾಗೂ ಸಂವಹನ ವೆಬ್‌ಸೈಟ್‌ಗಳಿಗೆ ಆತನ ಇಹಲೋಕ ಯಾತ್ರೆ ಮುಗಿಸಿದ ಸುದ್ದಿ ಭರಪೂರ ಬಳಕೆದಾರರನ್ನು ಒದಗಿಸಿದೆ.ಇದು ಒಂದು ಹಂತದಲ್ಲಿ ಟೀವಿ ಚಾನೆಲ್‌ಗಳ ವೇಗವನ್ನೇ ಮೀರಿಸುವಂತದ್ದು. ಮೈಕೆಲ್ ಜಾಕ್ಸನ್ ಹೃದಯಾಘಾತದಿಂದ ಸತ್ತ ಸುದ್ದಿಯನ್ನು ಮೊದಲು ಪ್ರಕಟಿಸಿದ್ದೇ TMZ.com ಎಂಬ ವೆಬ್‌ಸೈಟ್. ನಂತರವಷ್ಟೇ ಇತರ ಟೀವಿಗಳು, ವೆಬ್‌ಸೈಟ್‌ಗಳು ಎಚ್ಚರಗೊಂಡಿದ್ದವು. ಅಮೆರಿಕಾ ಕಾಲಮಾನ ಮಧ್ಯರಾತ್ರಿ 12.21ಕ್ಕೆ ಕುಸಿದು ಬಿದ್ದಿದ್ದ ಜಾಕ್ಸನ್ ಉಸಿರಾಟ ಆಗಲೇ ಬಹುತೇಕ ನಿಂತು ಹೋಗಿತ್ತು. ನಂತರ ಆಸ್ಪತ್ರೆಯಲ್ಲಿ 2.26ಕ್ಕೆ (ಭಾರತೀಯ ಕಾಲಮಾನ ರಾತ್ರಿ 11.56) ಜಾಕ್ಸನ್ ನಿಧನ ಹೊಂದಿದ್ದಾನೆ ಎಂದು ಅಧಿಕೃತವಾಗಿ ಪ್ರಕಟಿಸಲಾಯಿತು.ಈ ಹೊತ್ತಿನಲ್ಲಿ ಇತರೆಲ್ಲಾ ಟೀವಿ ಚಾನೆಲ್‌ಗಳು ಮತ್ತು ವೆಬ್‌ಸೈಟುಗಳು 70ರ ದಶಕದ ಖ್ಯಾತ ಟೀವಿ ತಾರೆ ಫರಾಹ್ ಫವ್ಕೆಟ್‌ರ ನಿಧನ ವಾರ್ತೆಯನ್ನು ಬಿತ್ತರಿಸುತ್ತಿದ್ದರೆ ಇತ್ತ ಟಿಎಂಝೆಡ್ ಮೊದಲ ಬಾರಿಗೆ ಜಾಕ್ಸನ್ ನಿಧನ ವಾರ್ತೆಯನ್ನು ಪ್ರಕಟಿಸಿತು ಎಂದು ಲಾಸ್ ಎಂಜಲೀಸ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.ಆದರೆ ಇದರ ಟ್ಯಾಬ್ಲಾಯ್ಡ್ ಪ್ರವೃತ್ತಿಯ ಕಾರಣ ಸುದ್ದಿ ಹೆಚ್ಚಿನ ಜನರಿಗೆ ತಲುಪಲಿಲ್ಲ. ತಲುಪಿದರೂ ಈ ಸೈಟ್‌ನ ಸುದ್ದಿಯನ್ನು ನಂಬಲು ಹಲವರಿಗೆ ಸಾಧ್ಯವಾಗಲಿಲ್ಲ. ಸಾಮಾಜಿಕ ಸಂವಹನ ವೆಬ್‌ಸೈಟ್‌ಗಳಾದ ಟ್ವಿಟ್ಟರ್ ಮತ್ತು ಪೇಸ್‌ಬುಕ್‌ಗಳದ್ದು ಬೇರೆಯೇ ಕಥೆ. ಜಾಕ್ಸನ್ ಇಹಲೋಕ ತ್ಯಜಿಸಿದ ಸುದ್ದಿ ಅಭಿಮಾನಿಗಳಿಗೆ ಬೇರೆ ಬೇರೆ ಮೂಲಗಳಿಂದ ತಿಳಿದು ಬರುತ್ತಿದ್ದಂತೆ ಟ್ವಿಟ್ಟರ್ ಮತ್ತು ಪೇಸ್‌ಬುಕ್‌ಗಳ ಮೂಲಕ ಸಾವಿರಾರು ಸಂದೇಶಗಳು ಹರಿಯಲಾರಂಭಿಸಿದವು.ತಮ್ಮ ನೋವು, ಭಾವನೆಗಳನ್ನು ಆತ್ಮೀಯರ ಜತೆ ಹಂಚಿಕೊಳ್ಳಲು ಲಕ್ಷಾಂತರ ಮಂದಿ ಇದನ್ನೇ ಅವಲಂಭಿಸಿದ್ದರು ಎಂದು ಸಂಸ್ಥೆಗಳು ಹೇಳಿಕೊಂಡಿವೆ. ಒಂದು ಹಂತದಲ್ಲಿ ನಮ್ಮ ಸೇವೆಯೇ ಸ್ಥಗಿತಗೊಳ್ಳುವಷ್ಟು ಸಂದಣಿ ಕಂಡು ಬಂದಿತ್ತು. ಹಲವು ಗ್ರಾಹಕರು ಸೇವೆಯಿಂದ ವಂಚಿತರಾಗಿದ್ದ ವರದಿಗಳೂ ಬಂದಿವೆ.ಮೈಕೆಲ್ ಜಾಕ್ಸನ್ ಸಾವು ನಿಸ್ಸಂಶಯವಾಗಿಯೂ ಒಂದು ಅತೀ ಹೆಚ್ಚಿನ ಮಹತ್ವದ ಸುದ್ದಿಯಾಗಿತ್ತು ಎಂದು ಯಾಹೂ ಪ್ರತಿಕ್ರಿಯಿಸಿದೆ. ಯಾಹೂ ನ್ಯೂಸ್ ಈ ಸಂದರ್ಭದಲ್ಲಿ 16.4 ಮಿಲಿಯನ್ ಓದುಗರ ದಾಖಲೆಯನ್ನೇ ನಿರ್ಮಿಸಿದೆ. ಚುನಾವಣೆಯ ದಿನದಂದು 15.1 ಮಿಲಿಯನ್ ಓದುಗರು ಜಾಲಾಡಿದ್ದೇ ಇದುವರೆಗಿನ ಯಾಹೂ ನ್ಯೂಸ್ ದಾಖಲೆಯಾಗಿತ್ತು.ಜಾಕ್ಸನ್ ಸಾವಿನಿಂದ ಇಂಟರ್ನೆಟ್‌ನಲ್ಲಿ ಭಾರೀ ಈ-ಮೈಲ್‌ಗಳು, ಚಾಟಿಂಗ್‌ಗಳು ನಡೆಯುತ್ತಿದ್ದ ಕಾರಣ ಹಲವು ವೆಬ್‌ಸೈಟ್‌ಗಳು ಸ್ಥಗಿತಗೊಂಡಿದ್ದವು. ಗೂಗಲ್ ಸರ್ಚ್ ಕೂಡ ಕೆಲ ಹೊತ್ತು ಈ ಅನಿರೀಕ್ಷಿತ ಹುಡುಕಾಟಗಳಿಂದ ಗೊಂದಲಕ್ಕೆ ಬಿದ್ದಿತ್ತು. ಯೂ ಟ್ಯೂಬ್ ಕೂಡ ಜಾಕ್ಸನ್ ವಿಡಿಯೋಗಳನ್ನೇ ತುಂಬಿಕೊಂಡು ನಳನಳಿಸುತ್ತಿದೆ. ವಿಶ್ವದ ಬಹುತೇಕ ಟೀವಿ ವಾಹಿನಿಗಳು ಮತ್ತು ವೆಬ್‌ಸೈಟ್‌ಗಳು ಜಾಕ್ಸನ್ ಸುದ್ದಿಯನ್ನೇ ಪ್ರಮುಖವಾಗಿಸಿವೆ. ಆ ಮೂಲಕ ತಮ್ಮ ವೀಕ್ಷಕರನ್ನು ಹೆಚ್ಚಿಸಿಕೊಂಡಿವೆ ಎಂದು ವರದಿಯಾಗಿದೆ. |