ಸರಕಾರದ ಗುರುತು ಚೀಟಿ ವಿತರಣಾ ಯೋಜನೆಯ ಅಧ್ಯಕ್ಷರಾಗಿ ನಂದನ್ ಎಂ. ನೀಲೇಕಣಿ ನೇಮಕವಾದ ಬೆನ್ನಿಗೆ ಇನ್ಫೋಸಿಸ್ ಮಹತ್ವಾಕಾಂಕ್ಷೆಯ ಯೋಜನೆಗಾಗಿ ಬಿಡ್ ಮಾಡುವುದಾಗಿ ಹೇಳಿಕೊಂಡಿದೆ.
ರಾಷ್ಟ್ರೀಯ ಗುರುತಿನ ಚೀಟಿ ವಿತರಣೆ ಯೋಜನೆ ಅಧ್ಯಕ್ಷರಾಗಿ ನೇಮಕವಾದ ಹಿನ್ನಲೆಯಲ್ಲಿ ನೀಲೇಕಣಿ ಇನ್ಫೋಸಿಸ್‌ನ ಸಹ-ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ ಬೆನ್ನಿಗೆ ಅದೇ ಯೋಜನೆಯನ್ನು ಕಾರ್ಯಗತಗೊಳಿಸುವ ಹರಾಜಿಗೆ ತಾನೂ ಪ್ರಯತ್ನಿಸುವುದಾಗಿ ಸಾಫ್ಟ್‌ವೇರ್ ದೈತ್ಯ ಹೇಳಿಕೊಂಡಿದೆ.
"ನಾವು ಈ ಹಿಂದೆಯೂ ಇ-ಆಡಳಿತ ಯೋಜನೆಗಳ ಬಿಡ್‌ಗಳಲ್ಲಿ ಭಾಗವಹಿಸಿದ್ದೇವೆ, ಮುಂದೆಯೂ ಭಾಗವಹಿಸುತ್ತೇವೆ. ಪ್ರಸಕ್ತ ಹರಾಜಿನಲ್ಲೂ ನಾವೂ ಪಾಲ್ಗೊಳ್ಳಲಿದ್ದೇವೆ" ಎಂದು ಇನ್ಫೋಸಿಸ್ ಮುಖ್ಯ ಕಾರ್ಯನಿರ್ವಾಹಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಎಸ್. ಗೋಪಾಲಕೃಷ್ಣನ್ ತಿಳಿಸಿದ್ದಾರೆ.
ಸಂಪುಟ ದರ್ಜೆಯ ಸ್ಥಾನಮಾನ ಹೊಂದಿರುವ ನೀಲೇಕಣಿ ಇದರ ಮುಖ್ಯಸ್ಥರಾಗಿರುವುದರಿಂದ ಸಮಸ್ಯೆಗಳೆದುರಾಗಬಹುದೇ ಎಂಬ ಪ್ರಶ್ನೆಗೆ ಗೋಲಾಲಕೃಷ್ಣನ್, ಕಂಪನಿ ಮತ್ತು ಅದರ ಮಾಜಿ ಸಹಾಧ್ಯಕ್ಷರು ಎಲ್ಲವೂ ಗರಿಷ್ಠ ಮಟ್ಟದ ಪ್ರಾಮಾಣಿಕತೆ ಮತ್ತು ಪಾರದರ್ಶಕತೆಗೊಳಪಡುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲಿದ್ದಾರೆ ಎಂದರು.
"ಯೋಜನೆಯಲ್ಲಿ ಭಾಗವಹಿಸುವುದಕ್ಕಾಗಿ ಇನ್ಫೋಸಿಸ್ ಗರಿಷ್ಠ ಮಟ್ಟದ ಸಮಗ್ರತೆಯನ್ನು ಖಚಿತಪಡಿಸಿಕೊಳ್ಳಲಿದೆ. ನೀಲೇಕಣಿ ಹರಾಜು ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಪಾಲಿಸುತ್ತಾರೆ ಎಂಬ ಭರವಸೆ ನನಗಿದೆ" ಎಂದು ತಿಳಿಸಿದ್ದಾರೆ.
ಈ ಯೋಜನೆಯ ವೆಚ್ಚದ ಬಗ್ಗೆಯೂ ತನಗೆ ಯಾವುದೇ ಅಂದಾಜಿಲ್ಲ ಎಂದಿರುವ ಜಾಗತಿಕ ಸಾಫ್ಟ್‌ವೇರ್ ದೈತ್ಯ, ಸರಕಾರಕ್ಕೆ ಮತ್ತು ಸಾರ್ವಜನಿಕರಿಗೆ ಈ ಯೋಜನೆಯಿಂದಾಗುವ ಉಪಯೋಗಗಳ ಬಗ್ಗೆ ತನಗೆ ಮಾಹಿತಿಯಿದೆ ಎಂದು ಹೇಳಿಕೊಂಡಿದೆ.
"ನಾವು ಯೋಜನೆಯ ಬಗ್ಗೆ ಯಾವುದೇ ರೀತಿಯ ಅಂದಾಜು ಹೊಂದಿಲ್ಲ. ಆದರೆ ಬೃಹತ್ ಯೋಜನೆಯೆಂಬುದು ತಿಳಿದಿದೆ. ಇದರಿಂದಾಗಿ ಸರಕಾರದ ವಿವಿಧ ಯೋಜನೆಗಳಿಗೆ ಸಹಕಾರವಾಗಲಿದೆ ಎಂಬುದನ್ನು ನಾವು ಅರಿತಿದ್ದೇವೆ" ಎಂದು ಗೋಲಾಪಕೃಷ್ಣನ್ ಹೇಳಿದ್ದಾರೆ.
|