ಪೆಟ್ರೋಲಿಯಮ್ ದರ ಏರಿಸುವ ನಿರ್ಧಾರಕ್ಕೆ ಬರುವ ಮೊದಲು ಅಂತಾರಾಷ್ಟ್ರೀಯ ಕಚ್ಚಾ ತೈಲ ಮಾರುಕಟ್ಟೆಯಲ್ಲಿನ ದರವನ್ನು ಸರಕಾರ ಗಮನಿಸಲಿದೆ ಎಂದು ಶನಿವಾರ ತಿಳಿಸಿದೆ.
ದುರದೃಷ್ಟವೆಂದರೆ ಅತ್ತ ಅಂತಾರಾಷ್ಟ್ರೀಯ ಕಚ್ಚಾ ತೈಲಗಳ ಬೆಲೆಯಲ್ಲೂ ಏರಿಕೆ ಕಂಡಿದೆ. ಹಾಗಾಗಿ ನಾವು ಪರಿಸ್ಥಿತಿಯನ್ನು ಕೂಲಂಕಷವಾಗಿ ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಪಣಜಿಯಲ್ಲಿ ಮಾತನಾಡುತ್ತಾ ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಮುರಳಿ ದಿಯೋರಾ ಪ್ರತಿಕ್ರಿಯೆ ನೀಡಿದ್ದಾರೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಯಾವಾಗ ಸ್ಥಿರತೆ ಕಂಡುಕೊಳ್ಳುತ್ತದೆ ಎಂಬುದನ್ನು ಅರಿತುಕೊಳ್ಳಲು ಕೆಲಕಾಲ ಸರಕಾರ ಕಾಯಲಿದೆ ಎಂದೂ ಮುನ್ಸೂಚನೆ ನೀಡಿದ್ದಾರೆ.
ಮತ್ತೂ ಮಾತು ಮುಂದುವರಿಸಿದ ದಿಯೋರಾ, "ಈ ವಿಚಾರದ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳುವ ಮೊದಲು ಸಂಪುಟವು ಕಚ್ಚಾ ತೈಲಗಳ ಬಗ್ಗೆ ಚರ್ಚೆ ನಡೆಸಲಿದೆ" ಎಂದರು.
ತೈಲ ಕಂಪನಿಗಳ ಸಮಾವೇಶದಲ್ಲಿ ಭಾಗವಹಿಸುವುದಕ್ಕೋಸ್ಕರ ಸಚಿವರು ಪ್ರಸಕ್ತ ಗೋವಾದಲ್ಲಿದ್ದಾರೆ. ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ರಾಜ್ಯ ಸಚಿವ ಜಿತಿನ್ ಪ್ರಸಾದರೊಂದಿಗೆ ಗೋವಾ ಮುಖ್ಯಮಂತ್ರಿ ದಿಗಂಬರ ಕಾಮತ್ ಮತ್ತು ರಾಜ್ಯ ಸರಕಾರದ ಇತರ ಅಧಿಕಾರಿಗಳನ್ನು ಕೂಡ ದಿಯೋರಾ ಇದೇ ಸಂದರ್ಭದಲ್ಲಿ ಭೇಟಿ ಮಾಡಿದರು.
ಬೆಲೆಯೇರಿಕೆಯಿಂದಾಗಿ ಬಡ ಜನತೆ ತೊಂದರೆಗೊಳಗಾಗುತ್ತಾರೆ ಎಂಬ ಬಗ್ಗೆ ಕಾಂಗ್ರೆಸ್ ನಾಯಕತ್ವದ ಕೇಂದ್ರ ಸರಕಾರವು ಸಂಪೂರ್ಣ ಕಾಳಜಿ ಹೊಂದಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಕುಸಿತ ನಂತರ ಇಲ್ಲೂ ಅದನ್ನು ಅಳವಡಿಸಲಾಗುತ್ತದೆ ಎಂದು ಕೇಂದ್ರ ಸಚಿವರು ಸ್ಪಷ್ಟಪಡಿಸಿದ್ದಾರೆ.
|