ಆರಂಭಿಕ ವರ್ಷದಲ್ಲಿ ಕೇವಲ ಎಂಟು ಶೇಕಡಾ ಬಡ್ಡಿಯೊಂದಿಗೆ ತಾನು ಹೊಸ ಕಾರು ಕೊಳ್ಳಲು ಸಾಲ ನೀಡುವ 'ಎಬಿಐ ಇಸೀ' ಯೋಜನೆಯನ್ನು ಜುಲೈ ಒಂದರಿಂದ ಜಾರಿಗೆ ತಂದಿರುವುದಾಗಿ ಭಾರತೀಯ ಸ್ಟೇಟ್ ಬ್ಯಾಂಕ್ ಶನಿವಾರ ತಿಳಿಸಿದೆ.
ಹೊಸ ಕಾರು ಕೊಳ್ಳುವವರು ಸ್ಟೇಟ್ ಬ್ಯಾಂಕ್‌ನಲ್ಲಿ ಸಾಲ ಪಡೆದರೆ ಆರಂಭಿಕ ವರ್ಷ ಕೇವಲ ಶೇಕಡಾ ಎಂಟರಷ್ಟು ಮಾತ್ರ ವಾರ್ಷಿಕ ಬಡ್ಡಿ ನೀಡಿದರೆ ಸಾಕು. ನಂತರ ಎರಡನೇ ಮತ್ತು ಮೂರನೇ ವರ್ಷ ಶೇಕಡಾ 10 ವಾರ್ಷಿಕ ಬಡ್ಡಿ ನೀಡಬೇಕು ಎಂದು ಬ್ಯಾಂಕ್ ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇಎಂಐ (ಸಮೀಕೃತ ಮಾಸಿಕ ಕಂತುಗಳು) ಮೂಲಕ ಭಾರತೀಯ ಸ್ಟೇಟ್ ಬ್ಯಾಂಕ್‌ನಿಂದ ಕಾರು ಕೊಳ್ಳಲು ಒಂದು ಲಕ್ಷ ರೂಪಾಯಿವರೆಗೆ ಸಾಲ ಪಡೆದಲ್ಲಿ ಆರಂಭಿಕ ವರ್ಷ 1,559 ರೂಪಾಯಿ, ಎರಡನೇ ಮತ್ತು ಮೂರನೇ ವರ್ಷ 1,647 ರೂಪಾಯಿಗಳನ್ನು ಪ್ರತೀ ತಿಂಗಳು ತುಂಬಬೇಕಾಗುತ್ತದೆ.
ನಾಲ್ಕನೇ ವರ್ಷದಿಂದ ನಂತರದ ಅವಧಿಯಲ್ಲಿ ಪಾವತಿ ಮಾಡಬೇಕಾದ ಕಂತನ್ನು ಪುನರ್‌ನವೀಕರಣಗೊಳಿಸಲಾಗುತ್ತದೆ. ಅದು ಸಾಲದ ಅವಧಿಯನ್ನು ಅವಲಂಭಿಸಿರುತ್ತದೆ ಎಂದು ಬ್ಯಾಂಕ್ ತಿಳಿಸಿದೆ.
ಬ್ಯಾಂಕಿನ ಪ್ರಮುಖ ಸಾಲ ದರಕ್ಕಿಂತ (ಪಿಎಲ್ಆರ್) ಎಸ್‌ಬಿಐ ಕಾರು ಸಾಲ ಚೀಟಿ ದರವು 0.25ರಿಂದ 0.75ರಷ್ಟು ಕಡಿಮೆಯಾಗಿದೆ ಎಂದು ಬ್ಯಾಂಕ್ ಹೇಳಿಕೊಂಡಿದೆ.
ಜತೆಗೆ ಆರಂಭಿಕ ವರ್ಷ ಶೇಕಡಾ 10 ಸ್ಥಿರ ಬಡ್ಡಿ ದರವನ್ನು ಫೆಬ್ರವರಿ 23ರಲ್ಲಿ ವಿಶೇಷವಾಗಿ ಪ್ರಕಟಿಸಿದ್ದ ಬ್ಯಾಂಕ್ ಅದನ್ನೀಗ ಸೆಪ್ಟೆಂಬರ್ 30ರವರೆಗೂ ವಿಸ್ತರಿಸಿದೆ.
|