ದೇಶದ ಪ್ರಮುಖ ವಿಮಾನಯಾನ ಕಂಪೆನಿ ಕಿಂಗ್‌ಫಿಶರ್ ಬೆಂಗಳೂರು ಹಾಗೂ ದುಬೈ ನಡುವೆ ನೇರ ವಿಮಾನ ಹಾರಾಟ ಆರಂಭಿಸಿದೆ.
ಬೆಂಗಳೂರಿನಿಂದ ಸಂಜೆ 6.15ಕ್ಕೆ ವಿಮಾನ ಹಾರಾಟ ಆರಂಭಿಸಿದರೆ, ದುಬೈನಿಂದ ರಾತ್ರಿ 10.10ಕ್ಕೆ ಹೊರಟು ಬೆಳಗಿನ ಜಾವ 3.45ಕ್ಕೆ ಬೆಂಗಳೂರಿಗೆ ಬಂದು ಸೇರಲಿದೆ.
ಬೆಂಗಳೂರು ಹಾಗೂ ದುಬೈ ನಡುವೆ ವಿಮಾನಯಾನ ಸೇವೆ ಆರಂಭಿಸಿರುವುದಕ್ಕೆ ನಮಗೆ ಹರ್ಷವಾಗುತ್ತಿದೆ. ನಮ್ಮ ಈ ನೂತನ ಯಾನದಲ್ಲಿ ನಮ್ಮ ಗ್ರಾಹಕರು ಇದೇ ಮಾರ್ಗವಾಗಿ ಸಂಚರಿಸುತ್ತಿರುವ ಇತರ ಸೇವೆಗಳಿಗೆ ಹೋಲಿಸಿದಲ್ಲಿ ಅತ್ಯುತ್ತಮ ಸೇವೆಯನ್ನು ಪಡೆಯಲಿದ್ದಾರೆ ಹಾಗೂ ಅನುಕೂಲಕರವಾದ ಸಮಯದಲ್ಲಿ ವಿಮಾನ ಹಾರಾಡುವುದರ ಜತೆಗೆ ಪ್ರಯಾಣಿಕರಿಗೆ ವಿಶೇಷ ಕೊಡುಗೆಗಳ ಆಯ್ಕೆ ನೀಡಲಿದೆ ಎಂದು ಕಿಂಗ್‌ಫಿಶರ್ ಏರ್‌ಲೈನ್ಸ್ ಲಿಮಿಟೆಡ್‌ನ ಗ್ಲೋಬಲ್ ಸೇಲ್ಸ್ ವಿಭಾಗದ ಉಪಾಧ್ಯಕ್ಷ ಶಿವರಾಮಕೃಷ್ಣ ತಿಳಿಸಿದರು.
ಲಂಡನ್, ಕೊಲಂಬೊ, ಢಾಕಾ ನಂತರ ಅಂತಾರಾಷ್ಟ್ರೀಯ ಸಂಪರ್ಕ ಮಾರ್ಗವಾಗಿ ಕಿಂಗ್‌ಫಿಶರ್ ಏರ್‌ಲೈನ್ಸ್ ದುಬೈಗೆ ತನ್ನ ಸೇವೆಯನ್ನು ವಿಸ್ತರಿಸಿದೆ.
ಈ ಪ್ರಯಾಣಕ್ಕಾಗಿ ಎ320 ವಿಮಾನಗಳನ್ನು ಬಳಸಲಿದ್ದು, ಇದರಲ್ಲಿ ಕಿಂಗ್‌ಫಿಶರ್ ಕ್ಲಾಸ್, ಪ್ರೀಮಿಯಂ ಎಕಾನಮಿ ಸೇವೆಯನ್ನು ನೀಡಲಿದೆ. ಆಹಾರದ ಜೊತೆ ವಿವಿಧ ಬಗೆಯ ವೈನ್ ಹಾಗೂ ಮದ್ಯ ಸೇವೆಯೂ ಲಭ್ಯವಿದೆ. ವಿಮಾನದೊಳಗೆ ಮನರಂಜನಾ ಸಾಧನಗಳನ್ನೂ ಅಳವಡಿಸಲಾಗಿದೆ. ಸಿನಿಮಾಗಳು, ಇಂಗ್ಲಿಷ್ ಮತ್ತು ಹಿಂದಿ ಟಿವಿ ಕಾರ್ಯಕ್ರಮಗಳು ಹಾಗೂ ಕಿಂಗ್‌ಫಿಶರ್ ರೇಡಿಯೂ ಕೂಡ ಲಭ್ಯ ಎಂದು ವಿವರಿಸಿದರು. |