ದೇಶದಲ್ಲಿ ಮುಂಗಾರು ಆಮನ 12 ದಿನ ವಿಳಂಬವಾಗಿದ್ದರೂ ಬರಗಾಲದ ಪರಿಸ್ಥಿತಿ ಎದುರಾಗಿಲ್ಲ ಎಂದು ಭಾನುವಾರ ಸರಕಾರ ಹೇಳಿಕೆ ನೀಡಿದ ಬೆನ್ನಿಗೆ ಉತ್ತರ ಭಾರತದ ಹಲವೆಡೆ ಮಳೆ ಆರಂಭವಾಗಿರುವ ಬಗ್ಗೆ ವರದಿಗಳಾಗಿವೆ.
ನೈಋತ್ಯ ಮುಂಗಾರು ಈ ಬಾರಿ ಕಡಿಮೆಯಾಗಬಹುದು ಎಂದು ಸರಕಾರ ಹೇಳಿರುವ ಕಾರಣ ಕೃಷಿ ಮತ್ತು ಆರ್ಥಿಕತೆಯ ಮೇಲಿನ ದುಷ್ಪರಿಣಾಮಗಳ ಕುರಿತು ಕಳವಳ ಹೆಚ್ಚಾಗಿತ್ತು.
ದೇಶದಲ್ಲಿ ಬರಗಾಲದ ಪರಿಸ್ಥಿತಿಯಿಲ್ಲ. ಜೂನ್‌ನಲ್ಲಿ ಮಾನ್ಸೂನ್ 12 ದಿನಗಳಷ್ಟು ತಡವಾಗಿದೆಯಷ್ಟೇ ಎಂದು ಕೇಂದ್ರ ಕೃಷಿ ಸಚಿವ ಶರದ್ ಪವಾರ್ ಪತ್ರಕರ್ತರೊಂದಿಗೆ ಮಾತನಾಡುತ್ತಾ ಪ್ರತಿಕ್ರಿಯಿಸಿದ್ದರು.
ಭಾರತೀಯ ಹವಾಮಾನ ಇಲಾಖೆಯ ಪ್ರಕಾರ ಜುಲೈ ತಿಂಗಳಲ್ಲಿ ಶೇಕಡಾ 93, ಆಗಸ್ಟ್‌ನಲ್ಲಿ ಶೇಕಡಾ 101ರಷ್ಟು ಮಳೆ ಬರಲಿದೆ. ಹವಾಮಾನ ಇಲಾಖೆಯ ಲೆಕ್ಕಾಚಾರಗಳು ಸರಿಯಾದಲ್ಲಿ ಬರಗಾಲದ ಪ್ರಶ್ನೆಯೇ ಬರುವುದಿಲ್ಲ ಎಂದು ಪವಾರ್ ಅಭಿಪ್ರಾಯಪಟ್ಟಿದ್ದರು.
ಅದೇ ಹೊತ್ತಿಗೆ ಭಾನುವಾರ ಬಿಹಾರ, ಉತ್ತರಾಂಚಲ ಮತ್ತು ರಾಜಸ್ತಾನ ಸೇರಿಂದಂತೆ ದೆಹಲಿ ಹಾಗೂ ಉತ್ತರ ಪ್ರದೇಶಗಳಲ್ಲೂ ಮಳೆಯಾಗಿದೆ. ಇದರಿಂದ ರೈತರು ಭಾರೀ ಸಂತಸಗೊಂಡಿದ್ದು, ಬಿತ್ತನೆ ಕಾರ್ಯಗಳಿಗಾಗಿ ಸಿದ್ಧತೆ ಆರಂಭಿಸಿದ್ದಾರೆ.
ಮಳೆಯ ಕಾರಣ ಹಲವೆಡೆ ನೀರು ತುಂಬಿ ಹರಿಯುತ್ತಿದ್ದರಿಂದ ಮಕ್ಕಳು ನೀರಾಟವಾಡುತ್ತಿದ್ದುದು ಸಾಮಾನ್ಯ ದೃಶ್ಯವಾಗಿತ್ತು. ಇದರಿಂದ ಬಿಸಿಲಿನ ತಾಪವೂ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ.
ಆದರೂ ದೇಶದಾದ್ಯಂತ ಮಳೆ ಸುರಿದಿಲ್ಲ ಎನ್ನುವುದು ಆತಂಕಕಾರಿ ವಿಚಾರ. ದಕ್ಷಿಣ ಭಾರತದಲ್ಲಿ ಸಾಮಾನ್ಯವಾಗಿ ಬರುವ ಮಳೆಯ ಪ್ರಮಾಣ ಇನ್ನೂ ಕಂಡು ಬಂದಿಲ್ಲವಾದ್ದರಿಂದ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗಲಿದೆ ಎಂದು ವಿಶ್ಲೇಷಿಸಲಾಗಿದೆ.
|