ಜಾಗತಿಕ ಆರ್ಥಿಕ ಹಿನ್ನಡೆಯನ್ನೂ ಮೆಟ್ಟಿ ನಿಂತಿರುವ ಟಿವಿಎಸ್ ಮೋಟಾರ್ ಕಂಪನಿಯು ಕಳೆದ ಆರ್ಥಿಕ ವರ್ಷದಲ್ಲಿ 31 ಕೋಟಿ ರೂಪಾಯಿಗಳ ನಿವ್ವಳ ಲಾಭಗಳಿಸಿದ್ದು, ಇದೀಗ ಮೂರು ಹೊಸ ಮಾದರಿಯ ವಾಹನಗಳನ್ನು ಬಿಡುಗಡೆ ಮಾಡುತ್ತಿದೆ.
ಮಾರ್ಚ್ 31, 2008ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ 31.77 ಕೋಟಿ ರೂಪಾಯಿಗಳ ಲಾಭ ಗಳಿಸಿದ್ದ ಟಿವಿಎಸ್ ಕಂಪನಿಯು 2009ರ ಆರ್ಥಿಕ ವರ್ಷದಲ್ಲಿ 31.08 ಕೋಟಿ ರೂಪಾಯಿಗಳ ಮಾಡಿದೆ.
ಅಲ್ಲದೆ ಒಟ್ಟಾರೆ ಆದಾಯದಲ್ಲಿ ಶೇಕಡಾ 14.26 ಏರಿಕೆಯಾಗಿ 3,736.67 ಕೋಟಿ ರೂಪಾಯಿಗಳನ್ನು ಮುಟ್ಟಿದೆ. ಇದು 2008ರ ಮಾರ್ಚ್‌ಗೆ ಕೊನೆಗೊಂಡ ವರ್ಷದಲ್ಲಿ 3,270.21 ಕೋಟಿ ರೂಪಾಯಿಗಳಾಗಿತ್ತು.
"ಕಂಪನಿಯು ತನ್ನ ಉತ್ಪಾದನಾ ಬಂಡವಾಳವನ್ನು ಮುಂದಿನ ದಿನಗಳಲ್ಲಿ ವಿಸ್ತರಿಸಲಿದೆ. ಅಲ್ಲದೆ ಈಗಿರುವ ಸ್ಕೂಟರ್ ಜತೆಗೆ ಹೆಚ್ಚು ಸಾಮರ್ಥ್ಯದ ಇಂಜಿನ್ ಹೊಂದಿರುವ ಸ್ಕೂಟರ್ ತಯಾರಿಸಲಿದ್ದೇವೆ" ಎಂದು ಕಂಪನಿಯ ವಕ್ತಾರರು ತಿಳಿಸಿದ್ದಾರೆ.
ಅಲ್ಲದೆ ಈ ಹಣಕಾಸು ವರ್ಷಾಂತ್ಯದೊಳಗೆ ಟಿವಿಎಸ್ ಬೈಕ್‌ನಲ್ಲಿ ಹೊಸ ಮಾದರಿಯ ಬಿಡುಗಡೆ ಕೂಡ ಮಾಡಲಿದ್ದೇವೆಂದ ಅವರು ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದ್ದಾರೆ.
ತ್ರಿಚಕ್ರ ವಾಹನ ವಿಭಾಗದಲ್ಲಿ ಕಂಪನಿಯು ಪೆಟ್ರೋಲ್ ಚಾಲಿತ ಫೋರ್ ಸ್ಟ್ರೋಕ್ ಟಿವಿಎಸ್ ಕಿಂಗ್, ಎಲ್‌ಪಿಜಿ ಹಾಗೂ ಸಿಎನ್‌ಜಿ ಮಾದರಿಗಳನ್ನು ಬಿಡುಗಡೆಗೊಳಿಸಲಿದೆ.
2009-10ರ ಆರ್ಥಿಕ ವರ್ಷದಲ್ಲಿ ಶೇಕಡಾ 12ರಿಂದ 15ರಷ್ಟು ಹೆಚ್ಚು ವಾಹನಗಳನ್ನು ಮಾರಾಟ ಮಾಡುವ ಉದ್ದೇಶವನ್ನು ಟಿವಿಎಸ್ ಮೋಟಾರ್ ಕಂಪನಿ ಹೊಂದಿದೆ.
2008-09ರಲ್ಲಿ ಕಂಪನಿಯು ಅದಕ್ಕಿಂತ ಹಿಂದಿನ ವರ್ಷಕ್ಕಿಂತ ಶೇಕಡಾ ಐದು ಹೆಚ್ಚಿನ ವಾಹನಗಳನ್ನು ಮಾರಾಟ ಮಾಡಿತ್ತು. 2007-8ರ ಹಣಕಾಸು ವರ್ಷದಲ್ಲಿ 12.77 ಲಕ್ಷ ವಾಹನಗಳನ್ನು ಟಿವಿಎಸ್ ಮಾರಿದ್ದರೆ ನಂತರದ ವರ್ಷ 13.42 ಲಕ್ಷ ವಾಹನಗಳನ್ನು ವಿತರಿಸಿತ್ತು.
|