ಉಕ್ಕಿನ ಮನುಷ್ಯ ಲಕ್ಷ್ಮೀ ಮಿತ್ತಲ್‌ಗೆ ಜಾಗತಿಕ ಆರ್ಥಿಕ ಹಿಂಜರಿತ ಒಂದು ಬೃಹತ್ ಸವಾಲೇ ಅಲ್ಲವಂತೆ; ಭಾರತವನ್ನು ತಾನು ಬಿಟ್ಟು ಬರುವುದೇ ತನಗೆ ಪ್ರಮುಖ ಸವಾಲಾಗಿತ್ತು ಎನ್ನುವುದು ಅವರ ಅಭಿಪ್ರಾಯ.
"ನನ್ನ ಪ್ರಕಾರ ನಾನು ಭಾರತ ಬಿಟ್ಟು ಬಂದ ಸಂದರ್ಭದಲ್ಲಿ ಎದುರಿಸಿದ್ದೇ ಬಹು ದೊಡ್ಡ ಸಮಸ್ಯೆ ಅಥವಾ ಸವಾಲು" ಎಂದು ಪ್ರಸಕ್ತ ಲಂಡನ್‌ನಲ್ಲಿ ನೆಲೆಸಿರುವ ಮಿತ್ತಲ್ ತಿಳಿಸಿದ್ದಾರೆ.
ಜಾಗತಿಕ ಮಾರುಕಟ್ಟೆ, ಜಾಗತಿಕ ಪರಿಸ್ಥಿತಿಯ ಬಗ್ಗೆ ನನಗೆ ಯಾವುದೇ ಕಲ್ಪನೆಗಳಿರಲಿಲ್ಲ. ಇಂಡೋನೇಷಿಯಾದಲ್ಲಿ ನೆಲೆ ಕಂಡುಕೊಂಡಾಗಲೂ ನನಗೆ ಯಾವುದರ ಅರಿವೂ ಇರಲಿಲ್ಲ. ಅದು ಪ್ರಮುಖ ಸವಾಲಾಗಿತ್ತು ಎಂದು ಆರ್ಸೆಲ್ಲರ್‌ಮಿತ್ತಲ್ ಕಂಪನಿಯ ಅಧ್ಯಕ್ಷ ಹಾಗೂ ಕಾರ್ಯನಿರ್ವಾಹಕಾಧಿಕಾರಿ ಮಿತ್ತಲ್ ತನ್ನ ಅನುಭವಗಳನ್ನು ಬಿಚ್ಚಿಟ್ಟರು.
ಈ ಪ್ರಮಾಣದ ಸಮಸ್ಯೆಗಳು ಎದುರಾಗಬಹುದೆಂದು ಅರ್ಸೆಲ್ಲರ್ ಮಿತ್ತಲ್ ನಿರೀಕ್ಷಿಸಿರಲಿಲ್ಲ ಎಂಬುದನ್ನು ಮಿತ್ತಲ್ ಒಪ್ಪಿಕೊಂಡರೂ, ಎಲ್ಲವನ್ನೂ ನಿಭಾಯಿಸುವ ಮೂಲಕ ಹಿಂಜರಿತವನ್ನು ಕಂಪನಿ ಅರಿತುಕೊಂಡು ವೆಚ್ಚಗಳಿಗೆ ಕಡಿವಾಣ ಹಾಕುವ ಉಪಾಯಕ್ಕೆ ಬಂದವರಲ್ಲಿ ತಾನೇ ಮೊದಲಿಗ ಎಂದೂ ಅವರು ಹೇಳಿಕೊಂಡಿದ್ದಾರೆ.
ರಾಜಸ್ತಾನದ ಸದುಲ್ಪುರ್‌ನಲ್ಲಿ ಜನಿಸಿದ್ದ ಮಿತ್ತಲ್‌ಗೀಗ 58 ವರ್ಷ. ಮೂರು ದಶಕಗಳ ಹಿಂದೆ ತಂದೆ ಮತ್ತು ಸಹೋದರರಿಂದ ಬೇರ್ಪಟ್ಟ ಅವರು ಕುಟಂಬದ ಅಂತಾರಾಷ್ಟ್ರೀಯ ವ್ಯವಹಾರಗಳಿಗಾಗಿ ಇಂಡೋನೇಷಿಯಾಕ್ಕೆ ತೆರಳಿದ್ದರು.
1976ರಲ್ಲಿ ಮಿತ್ತಲ್ ಸ್ಟೀಲ್ ಕಂಪನಿಯನ್ನು ಸ್ಥಾಪಿಸಿದ್ದ ಮಿತ್ತಲ್ ಭಾರತದ ಒಂದು ಲಕ್ಷ ಕೋಟಿ ರೂಪಾಯಿಗಳ ಉಕ್ಕಿನ ಯೋಜನೆಗೆ ಇನ್ನೂ ಒಪ್ಪಿಗೆ ದೊರೆಯದಿರುವುದಕ್ಕೆ ನಿರಾಸೆ ವ್ಯಕ್ತಪಡಿಸಿದ್ದಾರೆ.
ಇವೆಲ್ಲ ನಿರಾಸೆ ತಂದಿದೆ. ನಾವಿದನ್ನು ನಿರೀಕ್ಷಿಸಿರಲಿಲ್ಲ. ಜಮೀನು ಮಂಜೂರು, ಪರಿಸರ ನಿರಪೇಕ್ಷಣೆ, ಗಣಿ ಪರವಾನಗಿ ಸೇರಿದಂತೆ ಹಲವು ಅನುಮತಿಗಳಿಗಾಗಿ ನಾವೀಗಲೂ ಕಾಯುತ್ತಿದ್ದೇವೆ. ಇದರಿಂದಾಗಿ ನಮ್ಮ ಪ್ರಗತಿ ಎರಡು ವರ್ಷಗಳ ಕುಂಠಿತ ಕಂಡಿದೆ ಎಂದು ಮಿತ್ತಲ್ ತಿಳಿಸಿದ್ದಾರೆ.
|