ಆರ್ಥಿಕ ಹಿಂಜರಿತದ ಪರಿಣಾಮವಾಗಿ ಏಷಿಯಾದ ಬಹುತೇಕ ಮಹಿಳೆಯರು ತಮ್ಮ ಮಕ್ಕಳ ಪಾಲನೆ ಪೋಷಣೆಯ ಜತೆಗೆ ಉದ್ಯೋಗಗಳಲ್ಲೂ ತೊಡಗಿಕೊಳ್ಳುವ ಮೂಲಕ ಕೌಟುಂಬಿಕ ಆದಾಯದಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ ಎಂದು ಸಮೀಕ್ಷೆಯೊಂದು ತಿಳಿಸಿದೆ.
16 ದೇಶಗಳ ಸುಮಾರು 33,000 ಮಂದಿಯನ್ನು ಸಮೂಹ ಸಮೀಕ್ಷೆಗೊಳಪಡಿಸಿದಾಗ ಈ ವಿಚಾರ ಬಹಿರಂಗಗೊಂಡಿದ್ದು, ಏಷಿಯಾದ ನಾಲ್ಕು ಮಂದಿ ಮಹಿಳೆಯರಲ್ಲಿ ಮೂವರು ಉದ್ಯೋಗದ ಜತೆಗೆ ಕುಟುಂಬವನ್ನೂ ಸರಿದೂಗಿಸಬಲ್ಲರು ಎಂದು ತಿಳಿದು ಬಂದಿದೆ.
ಏಷಿಯಾದ ಮಹಿಳೆಯರು ಹಲವಾರು ಕಾಲದಿಂದ ನಿರ್ದಿಷ್ಟ ಭಾಗಗಳಲ್ಲಿ ಉದ್ಯೋಗಗಳಲ್ಲಿ ತೊಡಗಿಕೊಂಡು ಬಂದಿದ್ದು, ಇತ್ತೀಚಿನ ವರ್ಷಗಳ ಜಾಗತಿಕ ಆರ್ಥಿಕ ಕುಸಿತವು ನೌಕರಿ ಅತ್ಯಗತ್ಯ ಎಂಬುದನ್ನು ಹುಟ್ಟು ಹಾಕಿದೆ ಎಂದು 'ಏಷಿಯಾ ಕಡೆಗೊಂದು ನೋಟ' ಎಂಬ 'ಗ್ರೇ ಗ್ರೂಪ್' ಕಂಪನಿಯು ನಡೆಸಿದ ಸಮೀಕ್ಷೆಯಲ್ಲಿ ಬಯಲಾಗಿದೆ.
ಜಾಗತಿಕ ಕುಸಿತದಿಂದಾಗಿ ಹಲವು ಮಹಿಳೆಯರ ಮೇಲೆ ನೌಕರಿ ಹೊಂದಲೇ ಬೇಕಾದ ಅನಿವಾರ್ಯತೆಯು ಒತ್ತಡ ಸೃಷ್ಟಿಸಿದೆ. ಇದರಿಂದಾಗಿ ಅವರು ಕುಟಂಬದಲ್ಲಿ ಪ್ರಮುಖರಾಗಿ ಮೂಡಿ ಬರುತ್ತಿದ್ದಾರೆ ಎಂದು ಸಮೀಕ್ಷೆ ನಡೆಸಿದ 'ಗ್ರೇ ಗ್ರೂಪ್ ಏಷಿಯಾ ಪೆಸಿಪಿಕ್'ನ ಪ್ರಾಂತ ನಿರ್ದೇಶಕ ಚಾರು ಹರೀಶ್ ತಿಳಿಸಿದ್ದಾರೆ.
ಸಂಪ್ರದಾಯ ದೃಷ್ಟಿಕೋನದ ಫಲವಾಗಿ ಆಕೆ ಒಬ್ಬ ಹೆಂಡತಿಯಾಗಿ, ತಾಯಿಯಾಗಿದ್ದವಳು ಉದ್ಯೋಗಿಯಾಗಿಯೂ ಕಾರ್ಯನಿರ್ವಹಿಸುತ್ತಿರುವುದರಿಂದ ಅವಳನ್ನು ಗುರುತಿಸಲಾಗುತ್ತದೆ, ಗೌರವಿಸಲಾಗುತ್ತದೆ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.
ಶೇಕಡಾ 90ರಷ್ಟು ಜನ ತಾಯಂದಿರು ಕೆಲಸಕ್ಕೆ ಹೋಗುವ ಮೂಲಕ ಕೌಟುಂಬಿಕ ಆದಾಯಕ್ಕೆ ಕೊಡುಗೆ ನೀಡಬೇಕು. ಅದರಲ್ಲೂ ಪ್ರಸಕ್ತ ನೆಲೆಸಿರುವ ಆರ್ಥಿಕ ಪರಿಸ್ಥಿತಿಯಲ್ಲಿ ಅದು ಹೆಚ್ಚಿನ ಅಗತ್ಯ ಎಂದಿದ್ದಾರೆ.
16 ದೇಶಗಳಾದ ಆಸ್ಟ್ರೇಲಿಯಾ, ಬಾಂಗ್ಲಾದೇಶ, ಚೀನಾ, ಹಾಂಕಾಂಗ್, ಭಾರತ, ಇಂಡೋನೇಷಿಯಾ, ಜಪಾನ್, ಕೊರಿಯಾ, ಮಲೇಷಿಯಾ, ನ್ಯೂಜಿಲೆಂಡ್, ಫಿಲಿಫೈನ್ಸ್, ಸಿಂಗಾಪುರ, ಶ್ರೀಲಂಕಾ, ತೈವಾನ್, ಥಾಯ್ಲೆಂಡ್ ಮತ್ತು ವಿಯೆಟ್ನಾಂನ 33,000 ಮಹಿಳೆಯರನ್ನು ಈ ಸಮೀಕ್ಷೆಗಾಗಿ ಬಳಸಿಕೊಳ್ಳಲಾಗಿತ್ತು.
|