ಸತ್ಯಂ ಬ್ಯಾಲೆನ್ಸ್ ಶೀಟ್ ಲೆಕ್ಕಪರಿಶೋಧನೆ ನಾವು ಮಾಡಿಲ್ಲ; ಅದನ್ನು ನಡೆಸಿದ್ದು 'ಲವ್‌ಲಾಕ್ & ಲೇವಿಸ್' ಸಂಸ್ಥೆಯವರು ಎಂದು 'ಪ್ರೈಸ್ ವಾಟರ್‌ಹೌಸ್ ಕೂಪರ್ಸ್ ಇಂಡಿಯಾ'ದ (ಪಿಡಬ್ಲ್ಯೂಸಿ) ಅಧ್ಯಕ್ಷ ಹಾಗೂ ಕಾರ್ಯನಿರ್ವಹಣಾಧಿಕಾರಿ ರಮೇಶ್ ರಾಜನ್ ಕಳೆದ ವಾರ ಸಿಬಿಐ ನಡೆಸಿದ ವಿಚಾರಣೆ ವೇಳೆ ಬಹಿರಂಗಪಡಿಸಿದ್ದಾರೆ.
ಲೆಕ್ಕಪರಿಶೋಧನೆ ಶುಲ್ಕವನ್ನು 'ಪ್ರೈಸ್ ವಾಟರ್‌ಹೌಸ್, ಬೆಂಗಳೂರು' ಹೆಸರಿಗೆ ಪಾವತಿ ಮಾಡಲಾಗಿತ್ತಾದರೂ ನಂತರ ಅದನ್ನು 'ಲವ್‌ಲಾಕ್ & ಲೇವಿಸ್' ಖಾತೆಗೆ ವರ್ಗಾಯಿಸಲಾಗಿತ್ತು ಎಂದೂ ತಿಳಿದು ಬಂದಿದೆ.
"ಇಲ್ಲಿಂದ ನಂತರ ಹಣವನ್ನು ಪಾಲುದಾರರಾದ ಎಸ್. ಗೋಪಾಲಕೃಷ್ಣನ್ ಮತ್ತು ಶ್ರೀನಿವಾಸ್ ತಲ್ಲೂರಿ ವಾಪಸ್ ಪಡೆದಿದ್ದರು" ಎಂದು ಪ್ರಕರಣದ ವಿಚಾರಣೆಯಲ್ಲಿ ಪಾಲ್ಗೊಂಡಿದ್ದ ಮೂಲಗಳು ತಿಳಿಸಿವೆ.
ರಾಜನ್ ಹೊರತುಪಡಿಸಿ 'ಪ್ರೈಸ್ ವಾಟರ್‌ಹೌಸ್'ನ ದೆಹಲಿ ಮತ್ತು ಕೊಲ್ಕತ್ತಾದ ಉಳಿದಿಬ್ಬರು ಪ್ರಮುಖ ಪಾಲುದಾರರಿಗೆ ಕೂಡ ಸಿಬಿಐ ಕಳೆದ ವಾರ ಸಮನ್ಸ್ ಹೊರಡಿಸಿತ್ತು.
ಆದರೆ ಈ ಪಾಲುದಾರರು 'ಪ್ರೈಸ್ ವಾಟರ್‌ಹೌಸ್, ಬೆಂಗಳೂರು' ಜತೆ ಯಾವುದೇ ಸಂಬಂಧ ಹೊಂದಿರುವುದನ್ನು ಇದೇ ಸಂದರ್ಭದಲ್ಲಿ ನಿರಾಕರಿಸಿದ್ದಾರೆ. ಅಲ್ಲದೆ 'ಪ್ರೈಸ್ ವಾಟರ್‌ಹೌಸ್' ಪರ ಯಾವುದೇ ಬ್ಯಾಲೆನ್ಸ್ ಶೀಟ್‌ಗೆ ಒಪ್ಪಿಗೆ ಸೂಚಿಸಲು ಗೋಲಾಲಕೃಷ್ಣನ್ ಮತ್ತು ತಲ್ಲೂರಿಯವರಿಗೆ ಅಧಿಕಾರವಿರಲಿಲ್ಲ ಎಂದೂ ಅವರು ತಿಳಿಸಿದ್ದಾರೆ.
ಪ್ರೈಸ್ ವಾಟರ್‌ಹೌಸ್, ಬೆಂಗಳೂರಿನ ಪಾಲುದಾರರಾಗಿರುವ ಆಡಿಟರ್ಸ್ ತಪ್ಪಾಗಿ 'ಪ್ರೈಸ್ ವಾಟರ್‌ಹೌಸ್' ಹೆಸರಿನಲ್ಲಿ ಸಹಿ ಮಾಡಿದ್ದರು. ನಂತರ ಕೆಲಸ ಕಾರ್ಯಗಳನ್ನು ಲವ್‌ಲಾಕ್ & ಲೇವಿಸ್ ಸಂಸ್ಥೆಗೆ ಹೊರಗುತ್ತಿಗೆ ನೀಡಿದ್ದರು ಎಂದು ಮೂಲಗಳು ಸ್ಪಷ್ಟಪಡಿಸಿವೆ.
|