ಜುಲೈ ಮೂರರಂದು ಕೆಳಹಂತದ ಸುಮಾರು 11,000 ಸಿಬಂದಿಗಳಿಗೆ ವೇತನ ನೀಡಲು 'ಏರ್ ಇಂಡಿಯಾ' ಆಡಳಿತ ಮಂಡಳಿಯು ನಿರ್ಧರಿಸಿರುವ ಕಾರಣದಿಂದ ಮಂಗಳವಾರ ನಡೆಯಬೇಕಿದ್ದ ಪ್ರತಿಭಟನೆಯನ್ನು ಉದ್ಯೋಗಿಗಳು ಕೈ ಬಿಟ್ಟಿದ್ದಾರೆ.
ಒಟ್ಟಾರೆ 31,000 ನೌಕರರಲ್ಲಿ 11,000 ಮಂದಿಗೆ ಜುಲೈ 3ರಂದು ಏರ್ ಇಂಡಿಯಾ ಸಂಭಾವನೆ ನೀಡಲಿದೆ. ಉಳಿದ 20,000 ಸಿಬಂದಿಗಳ ವೇತನದ ಬಗ್ಗೆ ಜುಲೈ ನಾಲ್ಕರಂದು ಸಭೆ ನಡೆಯಲಿದೆ.
"ಮಂಗಳವಾರ ಯಾವುದೇ ಪ್ರತಿಭಟನೆಗಳು ನಡೆಯುವುದಿಲ್ಲ. ಈ ವಿಚಾರದ ಬಗ್ಗೆ ಆಡಳಿತ ಮಂದಳಿಯು ಗಂಭೀರವಾಗಿ ಯೋಚಿಸಿದೆ ಮತ್ತು ನಮ್ಮ ಶೇಕಡಾ 70ರಷ್ಟು ಉದ್ಯೋಗಿಗಳಿಗೆ ವೇತನ ನೀಡುವ ನಿರ್ಧಾರಕ್ಕೆ ಅದು ಬಂದಿದೆ" ಎಂದು ವೈಮಾನಿಕ ಉದ್ಯಮದ ನೌಕರರ ಸಂಘದ ವಲಯಪ್ರಧಾನ ಕಾರ್ಯದರ್ಶಿ ವಿ.ಜೆ. ದೇಖಾ ಪತ್ರಕರ್ತರಿಗೆ ಮಾಹಿತಿ ನೀಡಿದರು.
ಏರ್ ಇಂಡಿಯಾದ ಗ್ರೇಡ್ 1ರಿಂದ 9 ಹಾಗೂ ಇಂಡಿಯನ್ ಏರ್‌ಲೈನ್‌ನ ಗ್ರೇಡ್ 1, 2, 3, ಮತ್ತು 6ರಲ್ಲಿ ಬರುವ ಎಲ್ಲಾ ಸಿಬಂದಿಗಳಿಗೆ ಜುಲೈ 3ರಂದು ವೇತನ ನೀಡಲಾಗುತ್ತದೆ. ಜತೆಗೆ ಇಂಡಿಯನ್ ಏರ್‌ಲೈನ್ ಹಿರಿಯ ತಾಂತ್ರಿಕ ಸಿಬಂದಿವರೆಗಿನ ಸಂಭಾವನೆಯನ್ನು ಇದೇ ಸಂದರ್ಭದಲ್ಲಿ ನೀಡಲಾಗುತ್ತದೆ.
ಪರಿಶೀಲನಾ ಸಿಬಂದಿಗಳು, ಸರಂಜಾಮು ನಿರ್ವಹಣೆಗರರು, ಭದ್ರತಾ ಸಹಾಯಕರು ಮತ್ತು ಗಾರ್ಡ್‌ಗಳು ಕೆಳ ಹಂತದ ನೌಕರರ ಪಟ್ಟಿಯಲ್ಲಿ ಬರುತ್ತಾರೆ. ಸೂಪರ್‌ವೈಸರ್ ವಿಭಾಗ ಮತ್ತು ಅದಕ್ಕಿಂತ ಮೇಲ್‌ಸ್ತರದ ಅಂದರೆ ಗ್ರೇಡ್ 10ರಿಂದ 25ರವರೆಗಿನ ವಿಭಾಗದ ಸಮಸ್ಯೆಗಳ ಪರಿಹಾರದ ಬಗ್ಗೆ ಜುಲೈ ನಾಲ್ಕರಂದು ಮತ್ತೊಂದು ಸುತ್ತಿನ ಸಭೆ ನಡೆಯಲಿದೆ.
ವಿಮಾನ ಯಾನ ಸಂಸ್ಥೆ ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಿರುವ ಕಾರಣ ಜೂನ್ ತಿಂಗಳ ವೇತನವನ್ನು ನೌಕರರಿಗೆ 15 ದಿನ ವಿಳಂಬವಾಗಿ ನೀಡುತ್ತದೆ ಎಂದು ಈ ಹಿಂದೆ ಜೂನ್ 13ರಂದು ಏರ್ ಇಂಡಿಯಾ ಪ್ರಕಟಿಸಿತ್ತು.
|