ದುರ್ಬಲ ಅಮೆರಿಕನ್ ಡಾಲರ್ ಮತ್ತು ನೈಜೀರಿಯಾದಲ್ಲಿನ ತೈಲ ನೆಲೆಗಳಿಗೆ ಉಗ್ರಗಾಮಿಗಳ ದಾಳಿ ಹಿನ್ನಲೆಯಲ್ಲಿ ತೈಲ ಬೆಲೆ ಪ್ರತೀ ಬ್ಯಾರೆಲ್‌ಗೆ 73 ಡಾಲರ್‌ಗಿಂತಲೂ ಮೇಲಕ್ಕೇರಿದೆ. ಇದು ಕಳೆದ ಎಂಟು ತಿಂಗಳಿನಲ್ಲೇ ದಾಖಲಿಸಿದ ಗರಿಷ್ಠ ಬೆಲೆ ಎನ್ನಲಾಗಿದೆ.
ಬೆಂಚ್‌ಮಾರ್ಕ್ ಕಚ್ಚಾ ತೈಲದ ಆಗಸ್ಟ್ ವಿತರಣೆಯು 1.06 ಡಾಲರುಗಳ ಏರಿಕೆ ಕಂಡಿದ್ದು ಪ್ರತೀ ಬ್ಯಾರೆಲ್‌ಗೆ 72.55 ಡಾಲರುಗಳನ್ನು ದಾಖಲಿಸಿದೆ. ಸಿಂಗಾಪುರದ ದಿನದ ಮಧ್ಯದ ಅವಧಿಯಲ್ಲಿ ನ್ಯೂಯಾರ್ಕ್ ಮರ್ಕಂಟೈಲ್ ಎಕ್ಸ್‌ಚೇಂಜ್‌ನಲ್ಲಿ ಅತ್ಯಧಿಕ ಅಂದರೆ 73.38 ಡಾಲರುಗಳನ್ನು ಪ್ರತಿ ಬ್ಯಾರೆಲ್‌ಗೆ ಮಾರುಕಟ್ಟೆ ದಾಖಲಿತ್ತು. ಸೋಮವಾರ 2.33 ಡಾಲರುಗಳ ಹೆಚ್ಚಳದೊಂದಿಗೆ ಪ್ರತೀ ಬ್ಯಾರೆಲ್‌ಗೆ 71.49 ಡಾಲರ್ ದಾಖಲಿಸಿತ್ತು.
ಸೋಮವಾರ 1.4078 ಡಾಲರ್ ದಾಖಲಿಸಿದ್ದ ಯೂರೋ ಮಂಗಳವಾರ 1.4108 ಡಾಲರ್‌ಗಳಿಗೆ ಏರಿಕೆಯಾಗಿದೆ. ನೈಜೀರಿಯಾದಲ್ಲಿ ಉಗ್ರಗಾಮಿಗಳಿಂದ ಸೋಮವಾರವೂ ದಾಳಿ ಮುಂದುವರಿದ ಕಾರಣ ರಾಯಲ್ ಡಚ್ ಶೆಲ್ ಕಡಲಾಚೆಗಿನ ತೈಲ ಸಂಸ್ಕರಣಾ ಘಟಕವನ್ನು ಮುಚ್ಚಿದೆ. ನೈಜೀರಿಯಾವು ದಕ್ಷಿಣ ಆಫ್ರಿಕಾದ ಬಹುದೊಡ್ಡ ತೈಲ ಉತ್ಪಾದಕ.
ಏಷಿಯಾದಲ್ಲಿನ ಸಾಮಾನ್ಯ ದಿನಗಳಿಗಿಂತ ಮಂಗಳವಾರ ಮೂರು ಪಟ್ಟು ಹೆಚ್ಚು ಕಚ್ಚಾ ತೈಲಗಳ ವ್ಯಾಪಾರ ಕಂಡು ಬಂದಿದೆ ಎಂದು ಸಿಂಗಾಪುರ ಮಾರುಕಟ್ಟೆಯ ಉದ್ಯಮಿ ಕ್ಲಾರೆನ್ಸ್ ಚೂ ತಿಳಿಸಿದ್ದಾರೆ.
ಜಾಗತಿ ಕಚ್ಚಾ ತೈಲಗಳ ಏರಿಕೆಯ ಕಾರಣದಿಂದ ಅತ್ತ ಚೀನಾ ಕೂಡ ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಹೆಚ್ಚಿಸಿದೆ. ಮುಂದಿನ ಐದು ವರ್ಷಗಳ ಅವಧಿಯಲ್ಲಿ ಶೇಕಡಾ 60ರಷ್ಟು ಕಚ್ಚಾ ತೈಲವನ್ನು ಮೀಸಲಿರಿಸುವ ತಂತ್ರವನ್ನು ಅನುಸರಿಸುವ ನಿರ್ಧಾರದ ಮುನ್ಸೂಚನೆಯ ನಂತರದ ಬೆಳವಣಿಗೆ ಇದಾಗಿದೆ.
ಇಲ್ಲಿನ ಸರಕಾರವು ಗ್ಯಾಸೋಲಿನ್ ದರವನ್ನು ಶೇಕಡಾ 8.6 ಹಾಗೂ ಡೀಸೆಲ್ ದರದಲ್ಲಿ ಶೇಕಡಾ 9.6ರಷ್ಟು ಹೆಚ್ಚಿಸಿದೆ. ಇದು ಇಲ್ಲಿ ಈ ವರ್ಷ ದಾಖಲಾಗುತ್ತಿರುವ ನಾಲ್ಕನೇ ದರ ಬದಲಾವಣೆ.
|