ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕ ಅವಧಿಯಲ್ಲಿ ಅತೀ ಹೆಚ್ಚು ಉದ್ಯೋಗಳನ್ನು ಸೃಷ್ಟಿಸಿದ್ದು ಬ್ಯಾಂಕಿಂಗ್ ವಲಯ ಎಂದು ಕೈಗಾರಿಕಾ ಸಂಸ್ಥೆ 'ಅಸ್ಸೋಚಾಮ್' ತನ್ನ ಸಮೀಕ್ಷೆಯಲ್ಲಿ ತಿಳಿಸಿದೆ.
2009-10ರ ಆರ್ಥಿಕ ವರ್ಷದ ಆರಂಭಿಕ ತ್ರೈಮಾಸಿಕ ಅವಧಿಯ ಉದ್ಯೋಗದಾತರ ಪ್ರಕಟಣೆಯಲ್ಲಿ ಬ್ಯಾಂಕಿಂಗ್ ವಲಯವು 16,200ರೊಂದಿಗೆ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ. ಈ ಅವಧಿಯಲ್ಲಿ ಇದುವರೆಗೆ ಸೃಷ್ಟಿಯಾಗಿರುವ ಉದ್ಯೋಗ 38,460.
ಈ ಅಧ್ಯಯನದ ಅವಧಿಯಲ್ಲಿ ಕಂಡು ಬಂದ ಶೇಕಡಾವಾರು ಸಮೀಕ್ಷೆಯಲ್ಲಿ ಬ್ಯಾಂಕಿಂಗ್ ವಲಯವೇ ಪ್ರತಿಶತ 42ನ್ನು ಆಕ್ರಮಿಸಿಕೊಂಡಿದೆ ಎಂದೂ ಸಮೀಕ್ಷೆ ತಿಳಿಸಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು 13,000 ಉದ್ಯೋಗಗಳನ್ನು ಪ್ರಕಟಿಸುವ ಮೂಲಕ ಅತೀ ಹೆಚ್ಚು ಉದ್ಯೋಗ ಸೃಷ್ಟಿಸಿದ ಸ್ಥಾನವನ್ನು ಪಡೆದುಕೊಂಡಿದೆ. ಇದು ಗ್ರಾಮೀಣ ಪ್ರದೇಶಗಳಲ್ಲಿ ಮಾರ್ಕೆಟಿಂಗ್ ಮತ್ತು ವಸೂಲಾತಿ, ಕೃಷಿ ಕ್ಷೇತ್ರಕ್ಕಾಗಿ ತಾಂತ್ರಿಕ ಅಧಿಕಾರಿಗಳನ್ನು ಇದು ನೇಮಕ ಮಾಡಿಕೊಂಡಿತ್ತು.
ಇನ್ನುಳಿದಂತೆ ಕೇರಳ ಮೂಲದ ಧನಲಕ್ಷ್ಮೀ ಬ್ಯಾಂಕ್ 1,300, ಆಂಧ್ರ ಬ್ಯಾಂಕ್ 900 ಹಾಗೂ ಯೆಸ್ ಬ್ಯಾಂಕ್ 1,000 ಉದ್ಯೋಗಳನ್ನು ಸೃಷ್ಟಿಸಿದ ದಾಖಲೆಗಳು ಲಭ್ಯವಾಗಿವೆ.
ಐಟಿ/ಐಟಿಇಎಸ್ ವಲಯವು ದೇಶದಲ್ಲಿ ಅತೀ ಹೆಚ್ಚು ಉದ್ಯೋಗ ಸೃಷ್ಟಿಸಿದ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದೆ. ಅದು 12,200 ನೌಕರರನ್ನು ಈ ಅವಧಿಯಲ್ಲಿ ನೇಮಕ ಮಾಡಿಕೊಂಡಿದೆ. ಇಲ್ಲಿ ಸಾಫ್ಟ್‌ವೇರ್ ದೈತ್ಯ ವಿಪ್ರೋ ಗರಿಷ್ಠ ಉದ್ಯೋಗ ನೇಮಕಾತಿ ಮಾಡಿಕೊಂಡ ಸಂಸ್ಥೆಯೆಂದು ಗುರುತಿಸಿಕೊಂಡಿದೆ.
ಇತರ ವಲಯಗಳು 2,000, ಔಷಧ ವಲಯ 1,300, ಉಕ್ಕು ವಲಯ 600, ವೈಮಾನಿಕ 500 ಹಾಗೂ ದೀರ್ಘ ಬಳಕೆದಾರರ ವಲಯದಲ್ಲಿ 200 ಉದ್ಯೋಗಳು ಸೃಷ್ಟಿಯಾಗಿವೆ ಎಂದು ಸಮೀಕ್ಷೆ ತಿಳಿಸಿದೆ.
|