ಎಚ್‌ಡಿಎಫ್‌ಸಿ ಮತ್ತು ಐಸಿಐಸಿಐ ಮುಂತಾದ ಬ್ಯಾಂಕಿಂಗ್ ಎದುರಾಳಿಗಳಿಗೆ ಸವಾಲೆಸೆದಿರುವ ಭಾರತೀಯ ಸ್ಟೇಟ್ ಬ್ಯಾಂಕ್ ಇತ್ತೀಚೆಗಷ್ಟೇ ಪರಿಚಯಿಸಿದ್ದ ಗೃಹಸಾಲ ಯೋಜನೆಗಳಡಿಯಲ್ಲಿ ಮೊದಲ ಮೂರು ವರ್ಷ ಅತೀ ಕಡಿಮೆ ಬಡ್ಡಿ ದರ ವಿಧಿಸುವುದಾಗಿ ಪ್ರಕಟಿಸಿದೆ.
ಪೆಬ್ರವರಿಯಲ್ಲಿ ಬ್ಯಾಂಕ್ ಪರಿಚಯಿಸಿದ್ದ 30 ಲಕ್ಷ ರೂಪಾಯಿವರೆಗಿನ ಎಸ್‌ಬಿಐ ಸುಲಭ ಸಾಲ ಮತ್ತು 30 ಲಕ್ಷಕ್ಕಿಂತ ಹೆಚ್ಚಿನ ಎಸ್‌ಬಿಐ ಉಪಯುಕ್ತ ಗೃಹ ಸಾಲಗಳು ಆರಂಭಿಕ ವರ್ಷ ಕೇವಲ ಶೇಕಡಾ 8 ಬಡ್ಡಿಯನ್ನು ಮಾತ್ರ ಪಡೆದುಕೊಳ್ಳುತ್ತವೆ ಎಂದು ಬ್ಯಾಂಕ್ ಇದೀಗ ತಿಳಿಸಿದೆ.
ದೇಶದ ಅತೀ ದೊಡ್ಡ ಬ್ಯಾಂಕ್ ಮತ್ತೂ ಒಂದು ಹೆಜ್ಜೆ ಮುಂದುವರಿದು ಸಾಲ ಮರುಪಾವತಿಯ ಎರಡನೇ ಮತ್ತು ಮೂರನೇ ವರ್ಷಕ್ಕೂ ವಿಶೇಷ ದರಗಳನ್ನು ಪ್ರಕಟಿಸುವ ಮೂಲಕ ಸಾಲ ಮಾರುಕಟ್ಟೆಯಲ್ಲಿನ ಎದುರಾಳಿಗಳಿಗೆ ಪ್ರಬಲ ಹೊಡೆತ ನೀಡಿದೆ.
ಎಸ್‌ಬಿಐ ಸುಲಭ ಸಾಲ ಯೋಜನೆಯಡಿಯಲ್ಲಿ 30 ಲಕ್ಷವರೆಗಿನ ಸಾಲಕ್ಕೆ ಆರಂಭಿಕ ವರ್ಷ ಶೇಕಡಾ 8ರ ಬಡ್ಡಿ. ನಂತರ ಎರಡನೇ ಮತ್ತು ಮೂರನೇ ವರ್ಷ 100 ಆಧಾರ ಅಂಕಗಳ ಏರಿಕೆಯೊಂದಿಗೆ ಸ್ಥಿರವಾಗಿ ಬಡ್ಡಿ ದರವು ಶೇಕಡಾ 9 ಆಗಿರುತ್ತದೆ. ಮೂರನೇ ವರ್ಷದ ನಂತರದ ಪಾವತಿಯನ್ನು ಐದು ವರ್ಷಕ್ಕೊಮ್ಮೆ ಬದಲಾಯಿಸುವಂತಿರುವ ಆಯ್ಕೆಗಳಾದ 200 ಆಧಾರ ಅಂಕಗಳು ಅಥವಾ ಸ್ಥಿರ ದರದ 100 ಆಧಾರ ಅಂಕಗಳಲ್ಲಿ ಒಂದನ್ನು ಆರಿಸಬಹುದಾಗಿದೆ.
30 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಸಾಲ ಯೋಜನೆಯಾದ ಎಸ್‌ಬಿಐ ಅಡ್ವಾಂಟೇಜ್‌ನ ಮೊದಲ ವರ್ಷ ಶೇಕಡಾ 8ರ ಸ್ಥಿರ ಬಡ್ಡಿ ದರ ಮಾತ್ರ ಪಾವತಿಸಬೇಕಾಗುತ್ತದೆ. ಎರಡು ಮತ್ತು ಮೂರನೇ ವರ್ಷ ಶೇಕಡಾ 9.5ರ ಸ್ಥಿರ ಬಡ್ಡಿದರವನ್ನು ಬ್ಯಾಂಕ್ ವಿಧಿಸುತ್ತದೆ. ನಾಲ್ಕು ಮತ್ತು ಆ ನಂತರದ ವರ್ಷಗಳ ಬಡ್ಡಿ ದರವನ್ನು ಗ್ರಾಹಕರ ಆಯ್ಕೆಗೆ ಬಿಡಲಾಗುತ್ತದೆ. ಇಲ್ಲಿ ಗ್ರಾಹಕರು 100 ಆಧಾರ ಅಂಕಗಳು (ಎಸ್‌ಬಿಎಆರ್) ಅಥವಾ 50 ಆಧಾರ ಅಂಕಗಳ ಸ್ಥಿರ ಬಡ್ಡಿ ದರದ ನಡುವೆ ಪ್ರತಿ ಐದು ವರ್ಷಗಳಿಗೊಮ್ಮೆ ಬದಲಾಯಿಸಿಕೊಳ್ಳಬಹುದಾಗಿದೆ.
ಈ ಸಾಲ ಯೋಜನೆ ಪ್ರಕಾರ 20 ವರ್ಷಗಳ ಈಡಿನ ಮೇಲೆ ಸಾಲ ಪಡೆದುಕೊಂಡಿದ್ದಲ್ಲಿ ಆರಂಭಿಕ ವರ್ಷ ಪ್ರತೀ ಒಂದು ಲಕ್ಷ ಸಾಲಕ್ಕೆ 836 ರೂಪಾಯಿ ಕಂತು ಬರುತ್ತದೆ. ಎರಡು ಮತ್ತು ಮೂರನೇ ವರ್ಷ 929 ರೂಪಾಯಿಗಳನ್ನು ಕಟ್ಟಬೇಕು.
ಈಡಿನ ಆಧಾರದಲ್ಲಿ ಸಾಲ ನೀಡುವಲ್ಲಿ ಮುಂಚೂಣಿಯಲ್ಲಿರುವ ಎಚ್‌ಡಿಎಫ್‌ಸಿ ಮತ್ತು ಐಸಿಐಸಿಐ ಬ್ಯಾಂಕುಗಳು 30 ಲಕ್ಷ ರೂಪಾಯಿವರೆಗಿನ ಸಾಲಕ್ಕೆ ಶೇಕಡಾ 9.25ರ ಬಡ್ಡಿ ದರ ವಿಧಿಸುತ್ತವೆ. 30 ಲಕ್ಷಕ್ಕೂ ಮಿಕ್ಕಿದ ಸಾಲಗಳಿಗೆ ಎಚ್‌ಡಿಎಫ್‌ಸಿ ಶೇಕಡಾ 9.75 ಹಾಗೂ ಐಸಿಐಸಿಐ ಶೇಕಡಾ 10ರಿಂದ 11ರೊಳಗೆ ಬಡ್ಡಿದರ ನಿಗದಿಪಡಿಸುತ್ತದೆ. ಅಲ್ಲದೆ ಎಚ್‌ಡಿಎಫ್‌ಸಿ ಕೇಂದ್ರ ಬಜೆಟ್ ನಂತರ ದರಗಳನ್ನು ಮರುಪರಿಶೀಲಿಸುವುದಾಗಿ ಈಗಾಗಲೇ ಪ್ರಕಟಿಸಿದೆ.
|