ವೈಮಾನಿಕ ಇಂಧನ ಬೆಲೆ ಪ್ರತೀ ಕಿಲೋ ಲೀಟರಿಗೆ 2,300 ರೂಪಾಯಿಗಳಷ್ಟು ಹೆಚ್ಚಳ ಕಂಡಿರುವ ಹಿನ್ನಲೆಯಲ್ಲಿ ವಿಮಾನಯಾನ ಸಂಸ್ಥೆಗಳು ಮತ್ತೆ ಪ್ರಯಾಣ ದರ ಏರಿಸುವ ಸಾಧ್ಯತೆಗಳಿವೆ.
ಕೇವಲ 15 ದಿನಗಳ ಹಿಂದಷ್ಟೇ ವಿಮಾನಯಾನ ಸಂಸ್ಥೆಗಳು ಇಂಧನ ಮೇಲ್ತೆರಿಗೆಯಲ್ಲಿ 400 ರೂಪಾಯಿಗಳನ್ನು ಏರಿಸಿದ್ದವು. ಇದೀಗ ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ತೈಲ ಕಂಪನಿಗಳು ವೈಮಾನಿಕ ಇಂಧನ ಬೆಲೆಯಲ್ಲಿ 2,306 ರೂಪಾಯಿಗಳ ಹೆಚ್ಚಳವನ್ನು ಮಾಡಿವೆ. ಇದರೊಂದಿಗೆ ದೆಹಲಿಯಲ್ಲಿನ ಪ್ರತೀ ಕಿಲೋ ಲೀಟರ್ ವೈಮಾನಿಕ ಇಂಧನ ದರ 38,558 ರೂಪಾಯಿಗಳನ್ನು ತಲುಪಿದೆ.
ಜೂನ್ 15ರಂದು ಶೇಕಡಾ 12ರಷ್ಟು ಬೆಲೆ ಏರಿಸಿದ್ದ ಕಂಪನಿಗಳು ಮತ್ತೆ ಅದೇ ಹಾದಿ ತುಳಿದಿವೆ. ದೆಹಲಿಯಲ್ಲಿನ ದರದ ಪ್ರಕಾರ ಪ್ರತೀ ಕಿಲೋ ಲೀಟರಿಗೆ 3,949ರಂತೆ ಏರಿಸಿ 36,252 ರೂಪಾಯಿಗಳೆಂದು ನಿಗದಿಪಡಿಸಲಾಗಿತ್ತು.
ಅಮೆರಿಕಾ ಡಾಲರ್ ಬೆಲೆ ಕುಸಿದ ಕಾರಣ ಮತ್ತು ನೈಜೀರಿಯಾ ಉಗ್ರಗಾಮಿಗಳ ದಾಳಿಯಿಂದಾಗಿ ಕಳೆದ ಏಳು ತಿಂಗಳುಗಳಲ್ಲೇ ಗರಿಷ್ಠ ದರ ಕಚ್ಚಾ ತೈಲ ಬೆಲೆಯಲ್ಲಿ ಕಂಡು ಬಂದಿದ್ದು, ಪ್ರತೀ ಬ್ಯಾರೆಲ್‌ಗೆ 72 ಡಾಲರ್ ಮುಟ್ಟಿತ್ತು.
ಜುಲೈಯಿಂದ ಸೆಪ್ಟೆಂಬರ್‌ವರೆಗಿನ ಅವಧಿಯಲ್ಲಿ ಗ್ರಾಹಕರಿಗೆ ವಿಶೇಷ ದರಗಳನ್ನು ಪ್ರಕಟಿಸಿ ಉತ್ತೇಜಿಸಲು ನೋಡಿದ್ದ ವಿಮಾನಯಾನ ಸಂಸ್ಥೆಗಳೀಗ ಪ್ರಯಾಣಿಕರಿಗೆ ಆಘಾತವಾಗದಂತೆ ಹೇಗೆ ನಡೆದುಕೊಳ್ಳುವುದು ಎಂಬ ಚಿಂತೆಯಲ್ಲಿ ಬಿದ್ದಿವೆ. ಬೇಡಿಕೆ ಕಡಿಮೆಯಾಗುವ ಈ ಅವಧಿಯಲ್ಲೇ ತೈಲ ಬೆಲೆಯಲ್ಲೂ ಹೆಚ್ಚಳ ಕಂಡು ಬಂದಿರುವುದರಿಂದ ಮೇಲ್ತೆರಿಗೆ ಏರಿಕೆ ಅನಿವಾರ್ಯ ಎಂಬ ಮಾತೂ ಕೇಳಿ ಬರುತ್ತಿದೆ.
ಇತ್ತ ಜೆಟ್ ಏರ್‍ವೇಸ್ ಮತ್ತು ಕಿಂಗ್‌ಫಿಶರ್ ವಕ್ತಾರರು ಇತ್ತೀಚಿನ ದರ ಏರಿಕೆಯನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದ್ದರೆ, ಏರ್ ಇಂಡಿಯಾ ಈ ಪರಿಸ್ಥಿತಿಯಲ್ಲಿ ಮತ್ತೆ ದರ ಏರಿಸುವ ಸಾಧ್ಯತೆಯನ್ನು ತಳ್ಳಿ ಹಾಕಿದೆ.
ಜೂನ್ ತಿಂಗಳ ಮಧ್ಯದಲ್ಲಿ ತೈಲ ಬೆಲೆಯೇರಿಕೆಯ ಕಾರಣ ಇಂಧನ ಮೇಲ್ತೆರಿಗೆಯನ್ನು ದೇಶೀಯ ವಿಮಾನಗಳಲ್ಲಿ 1,499 ರೂಪಾಯಿಗಳಿಂದ 3,400ರವರೆಗೆ ಹೆಚ್ಚಿಸಲಾಗಿತ್ತು. ಈಗ ಮತ್ತೆ ಬೆಲೆಯೇರಿಸಲು ವಿಮಾನಯಾನ ಸಂಸ್ಥೆಗಳು ಮುಂದಾಗದಿದ್ದಲ್ಲಿ ಉಳಿಯುವ ಆಯ್ಕೆ ಕೆಲವು ಮಾರ್ಗಗಳ ಯಾನಗಳನ್ನು ಸ್ಥಗಿತಗೊಳಿಸುವುದು. ಆ ಮೂಲಕ ಖರ್ಚುವೆಚ್ಚಗಳನ್ನು ನಿಯಂತ್ರಿಸಬಹುದು ಎಂದು ಉದ್ಯಮ ವಲಯಗಳು ಅಭಿಪ್ರಾಯಪಟ್ಟಿವೆ.
|