ಪ್ರಮುಖ ಜಾಗತಿಕ ಮಾರುಕಟ್ಟೆಗಳಾದ ಅಮೆರಿಕಾ ಮತ್ತು ಯೂರೋಪ್‌ಗಳಲ್ಲಿನ ಆರ್ಥಿಕ ಹಿಂಜರಿತದಿಂದಾಗಿ ವಿದೇಶಿ ಸರಕುಸಾಗಣೆ ಮೇಲೆ ಹೊಡೆತ ಬಿದ್ದಿದ್ದು, ಭಾರತದ ರಫ್ತು ಪ್ರಮಾಣವು ಶೇಕಡಾ 29.2ರಷ್ಟು ಕುಸಿತ ಕಂಡಿದೆ.
ಸತತ ಎಂಟು ತಿಂಗಳುಗಳಿಂದ ಈ ಕುಸಿತವು ಮುಂದುವರಿದಿದ್ದು, ಕಳೆದ ವರ್ಷದ ಇದೇ ತಿಂಗಳಿನ ಪ್ರಮಾಣಕ್ಕಿಂತ ಭಾರೀ ಕಡಿಮೆ ರಫ್ತು ದಾಖಲಾಗಿದೆ.
ಇಂದು ಸರಕಾರ ಬಿಡುಗಡೆ ಮಾಡಿರುವ ಮಾಹಿತಿಗಳ ಪ್ರಕಾರ ಈ ವರ್ಷದ ಮೇ ತಿಂಗಳಲ್ಲಿ ಭಾರತವು ಕೇವಲ 11.01 ಬಿಲಿಯನ್ ಅಮೆರಿಕನ್ ಡಾಲರ್ ಆದಾಯವನ್ನು ರಫ್ತಿನಿಂದ ಗಳಿಸಿದೆ. ಆದರೆ ಕಳೆದ ವರ್ಷದ ಇದೇ ತಿಂಗಳಲ್ಲಿ ಇದರ ಪ್ರಮಾಣ 15.55 ಬಿಲಿಯನ್ ಡಾಲರ್‌ಗಳಾಗಿತ್ತು.
ಆಮದು ಪ್ರಮಾಣದಲ್ಲೂ ಸತತ ಐದನೇ ತಿಂಗಳಿನ ಕುಸಿತ ಮುಂದುವರಿದಿದ್ದು ಇದರ ಪ್ರಮಾಣ ಮೇ ತಿಂಗಳಲ್ಲಿ ಶೇಕಡಾ 39.2ರಿಂದ 16.21 ಬಿಲಿಯನ್ ಅಮೆರಿಕನ್ ಡಾಲರುಗಳು.
ಇಲ್ಲಿ ದಾಖಲಾಗಿರುವ ವಾಣಿಜ್ಯ ಕೊರತೆಯ ಪ್ರಮಾಣ 5.20 ಬಿಲಿಯನ್ ಅಮೆರಿಕನ್ ಡಾಲರ್. ಕಳೆದ ವರ್ಷದ ಮೇ ತಿಂಗಳಲ್ಲಿ 11.13 ಬಿಲಿಯನ್ ಡಾಲರ್‌ಗಳಾಗಿದ್ದವು.
ಏಪ್ರಿಲ್‌ನಲ್ಲಿ ಶೇಕಡಾ 33.2ರಂತೆ ಕುಸಿದು 10.74 ಬಿಲಿಯನ್ ಅಮೆರಿಕನ್ ಡಾಲರ್‌ಗೆ ತಲುಪಿತ್ತು. 2008ರ ಏಪ್ರಿಲ್ ತಿಂಗಳಲ್ಲಿ ಇದು 16.08 ಬಿಲಿಯನ್ ಡಾಲರ್‌ಗಳಾಗಿದ್ದವು.
ಏಪ್ರಿಲ್ - ಮೇ ಅವಧಿಯಲ್ಲಿ ರಫ್ತು ಪ್ರಮಾಣವು ಶೇಕಡಾ 31.2ರಷ್ಟು ಕುಸಿದು 21.75 ಬಿಲಿಯನ್ ಅಮೆರಿಕನ್ ಡಾಲರ್ ತಲುಪಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 31.62 ಬಿಲಿಯನ್ ಡಾಲರ್ ದಾಖಲಾಗಿತ್ತು.
|