ದೇಶದ ಮೂರನೇ ಬೃಹತ್ ದ್ವಿಚಕ್ರ ವಾಹನ ತಯಾರಿಕಾ ಕಂಪನಿ ಟಿವಿಎಸ್ ಮೋಟಾರ್ 2009 ಜೂನ್ ತಿಂಗಳ ಮಾರಾಟದಲ್ಲಿ ಕಳೆದ ವರ್ಷದ ಇದೇ ತಿಂಗಳಿನ ಪ್ರಮಾಣಕ್ಕಿಂತ ಶೇಕಡಾ 5.83 ಹೆಚ್ಚಳ ದಾಖಲಿಸಿದೆ.
ಕಳೆದ ವರ್ಷದ ಜೂನ್ ತಿಂಗಳಲ್ಲಿ 109,082 ವಾಹನಗಳನ್ನು ಮಾರಾಟ ಮಾಡಲಾಗಿದ್ದರೆ, ಈ ಬಾರಿ ಶೇಕಡಾ ಆರರಷ್ಟು ವೃದ್ಧಿ ಸಾಧಿಸುವ ಮೂಲಕ 115,448ನ್ನು ಮುಟ್ಟಿದೆ.
ಜೂನ್ ತಿಂಗಳ ದೇಶೀಯ ಮಾರಾಟದಲ್ಲಿ ಕಂಪನಿಯು ಶೇಕಡಾ 12ರ ಅಭಿವೃದ್ಧಿ ಸಾಧಿಸಿದ್ದು, ಮಾರಾಟದ ಸಂಖ್ಯೆ 1,05,361.ಕಳೆದ ವರ್ಷದ ಇದೇ ತಿಂಗಳಲ್ಲಿ ಕಂಪನಿ ಮಾರಿದ್ದ ವಾಹನಗಳು 94,072 ಮಾತ್ರ.
ಸ್ಕೂಟರ್ ಮಾರಾಟದಲ್ಲಿ ಶೇಕಡಾ 21ರ ಹೆಚ್ಚಳ ದಾಖಲಾಗಿದ್ದು, 25,945 ವಾಹನಗಳನ್ನು ವಿತರಿಸಲಾಗಿದೆ. ಕಳೆದ ವರ್ಷ 21,466 ವಾಹನಗಳನ್ನು ಮಾರಾಟ ಮಾಡಲಾಗಿತ್ತು.
ಒಟ್ಟಾರೆ ಮೋಟಾರ್ ಸೈಕಲ್ ಮಾರಾಟವು 2009ರ ಜೂನ್‌ನಲ್ಲಿ 46,048 ಆಗಿದ್ದರೆ, 2008ರ ಜೂನ್‌ನಲ್ಲಿ 51,409 ಆಗಿತ್ತು.
ಅದೇ ಹೊತ್ತಿಗೆ ರಫ್ತು ಪ್ರಮಾಣದಲ್ಲಿ ಶೇಕಡಾ 32ರ ಕುಸಿತ ಕಂಡು ಬಂದಿದೆ. ಕಳೆದ ವರ್ಷದ ಈ ತಿಂಗಳಿನಲ್ಲಿ 15,010 ವಾಹನಗಳನ್ನು ರಫ್ತು ಮಾಡಲಾಗಿತ್ತು. ಆದರೆ ಈ ಬಾರಿ ಅದು 10,087ಕ್ಕೆ ಸೀಮಿತಗೊಂಡಿದೆ.
ಅಲ್ಲದೆ ಟಿವಿಎಸ್ ಮೋಟಾರ್ ಕಂಪನಿಯು ಈ ಬಾರಿ ಎರಡು ನೂತನ ಮಾದರಿಯ ಮೋಟಾರ್ ಸೈಕಲ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಅಪಾಚೆ ಆರ್‌ಟಿಆರ್ 180 ಮತ್ತು ಟಿವಿಎಸ್ ಫ್ಲೇಮ್‌ನ ಹೊಸ ಮಾದರಿಗಳನ್ನು ಬಿಡುಗಡೆ ಮಾಡಲಾಗಿದೆ. ಹಾಗಾಗಿ ಮುಂದಿನ ಹಂತಗಳಲ್ಲಿ ಹೆಚ್ಚಿನ ಮಾರಾಟ ದಾಖಲಿಸುವ ನಿರೀಕ್ಷೆ ಕಂಪನಿಯದ್ದು.
|