ಭಾರತ ಸರಕಾರವು ಚೀನಾದ ಕ್ಷೀರೋತ್ಪನ್ನಗಳನ್ನು ಬಹಿಷ್ಕರಿಸಿರುವ ಕಾರಣ ಎರಡು ರಾಷ್ಟ್ರಗಳ ನಡುವೆ ವಾಣಿಜ್ಯ ಯುದ್ಧದ ಭೀತಿ ತಲೆದೋರಿದ್ದು, ಭಾರತೀಯ ಉತ್ಪಾದನೆಗಳ ಮೇಲೂ ನಿಷೇಧ ಹೇರುವ ಮೂಲಕ ಸೇಡು ತೀರಿಸಿಕೊಳ್ಳುವ ಬೆದರಿಕೆ ಹಾಕಿದೆ.
ಜೂನ್ 24ಕ್ಕೆ ಮುಕ್ತಾಯಗೊಂಡಿದ್ದ ಮುಕ್ತಾಯಗೊಂಡಿದ್ದ ಹಾಲು ಮತ್ತು ಹಾಲಿನ ಉತ್ಪನ್ನಗಳ ಮೇಲಿನ ನಿಷೇಧವನ್ನು ಡಿಸೆಂಬರ್ 24 ಅಂದರೆ ಮತ್ತೆ ಆರು ತಿಂಗಳುಗಳವರೆಗೆ ಭಾರತ ವಿಸ್ತರಿಸಿರುವುದರಿಂದ ಚಿಂತಿತವಾಗಿರುವ ಚೀನಾ ಭಾರತೀಯ ಉತ್ಪನ್ನಗಳ ಮೇಲೂ ಮುಯ್ಯಿಗೆ ಮುಯ್ಯಿ ತೀರಿಸಿಕೊಳ್ಳುವುದಾಗಿ ತಿಳಿಸಿದೆ.
"ಆರ್ಥಿಕ ಹಿನ್ನಡೆಯ ಈ ಅವಧಿಯಲ್ಲಿ ನಾವು ಯಾವುದೇ ಬಗೆಯ ವ್ಯವಹಾರ ನಿರ್ಬಂಧಗಳನ್ನು ಪ್ರಬಲವಾಗಿ ವಿರೋಧಿಸುತ್ತೇವೆ. ಬ್ರಿಕ್ ಮತ್ತು ಡಬ್ಲ್ಯೂಟಿಓ ಸದಸ್ಯರಾಗಿರುವ ನಮ್ಮ ಉತ್ಪಾದನೆಗಳ ಮೇಲೆ ನೀವು ಹೇರಿರುವ ನಿರ್ಬಂಧಗಳನ್ನು ದ್ವಿಪಕ್ಷೀಯ ಸುರಕ್ಷಿತ ವ್ಯವಹಾರಗಳ ನಿಟ್ಟಿನಲ್ಲಿ ತೆರವುಗೊಳಿಸುವ ಭರವಸೆ ಹೊಂದಿದ್ದೇವೆ" ಎಂದು ಚೀನಾದ ಗುಣಮಟ್ಟ ನಿಯಂತ್ರಣ ಮಂಡಳಿಯ ಪ್ರಮುಖರು ಭಾರತೀಯ ರಾಯಭಾರಿ ಕಚೇರಿಗೆ ಕಳುಹಿಸಿರುವ ಪತ್ರದಲ್ಲಿ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.
ಮತ್ತೂ ಮುಂದುವರಿದಿರುವ ಪತ್ರದ ಭಾಗದಲ್ಲಿ ಚೀನಾವು, "ಹಾಗೊಂದು ವೇಳೆ ಭಾರತವು ತನ್ನ ನಿರ್ಧಾರದಿಂದ ಹಿಂದೆ ಸರಿಯದಿದ್ದಲ್ಲಿ ಚೀನಾವು ಭಾರತದಿಂದ ಆಮದು ಮಾಡಿಕೊಂಡ ವಸ್ತುಗಳ ಸುರಕ್ಷತೆ ಮತ್ತು ಗುಣಮಟ್ಟದ ಬಗ್ಗೆ ತಕ್ಕ ಪ್ರತಿಕ್ರಿಯೆ ನೀಡಲಿದೆ" ಎಂದಿದೆ.
ವಾಣಿಜ್ಯ ಸಚಿವಾಲಯದ ಮೂಲಗಳ ಪ್ರಕಾರ ಚೀನಾವು ಭಾರತದಿಂದ ಆಮದು ಮಾಡಿಕೊಳ್ಳುವ ಸಾಗರೋತ್ಪನ್ನಗಳು, ಕ್ಷೀರೋತ್ಪನ್ನಗಳು ಹಾಗೂ ಎಳ್ಳೆಣ್ಣೆ ಸೇರಿದಂತೆ ಆಹಾರ ಪದಾರ್ಥಗಳ ಗುಣಮಟ್ಟದ ಬಗ್ಗೆ ಸಂಶಯಗಳನ್ನು ವ್ಯಕ್ತಪಡಿಸಿದ್ದು, ಭಾರತವು ತನ್ನ ಉತ್ಪನ್ನಗಳ ಮೇಲಿನ ನಿಷೇಧವನ್ನು ಹಿಂತೆಗೆಯಬೇಕೆಂಬ ಒತ್ತಡ ಹೇರುತ್ತಿದೆ. ಹಾಗಿದ್ದರೂ ತಾನು ಭಾರತೀಯ ಉತ್ಪನ್ನಗಳ ಮೇಲೆ ಯಾವುದೇ ರೀತಿಯ ನಿರ್ಬಂಧ ವಿಧಿಸಿಲ್ಲ ಎನ್ನುವ ಸಂದೇಶವನ್ನೂ ಅದು ರವಾನಿಸಿದೆ ಎಂದು ಸಚಿವಾಲಯ ತಿಳಿಸಿದೆ.
ಏಷಿಯಾ ಮತ್ತು ಆಫ್ರಿಕಾದ ಹತ್ತಾರು ದೇಶಗಳು ಚೀನಾದ ಹಾಲು ಮತ್ತು ಹಾಲುತ್ಪನ್ನಗಳ ಮೇಲೆ ನಿಷೇಧ ಹೇರಿದ್ದು, ಇತರ ಹಲವು ದೇಶಗಳು ಕೂಡ ಚೀನಾದ ಈ ಉತ್ಪಾದನೆಗಳನ್ನು ಕಲ್ಮಷಯುಕ್ತ ಎಂಬ ಸಂಶಯಗಳನ್ನು ವ್ಯಕ್ತಪಡಿಸಿವೆ.
|