ಸತತ ಮೂರನೇ ವಾರವೂ ಋಣಾತ್ಮಕತೆಯನ್ನೇ ಮುಂದುವರಿಸಿರುವ ಹಣದುಬ್ಬರವು ಜೂನ್ 20ಕ್ಕೆ ಅಂತ್ಯಗೊಂಡ ವಾರದಲ್ಲಿ ಶೇಕಡಾ (-)1.3ನ್ನು ದಾಖಲಿಸಿದೆ.ಕಳೆದ ವರ್ಷದ ಇದೇ ಅವಧಿಗಿಂತ ಈ ವರ್ಷ ಆಹಾರ ಪದಾರ್ಥಗಳಾದ ಫಲವಸ್ತುಗಳು, ತರಕಾರಿ ಬೆಲೆಗಳಲ್ಲಿ ಏರಿಕೆಯಾಗಿದ್ದರೂ ಸಹ ಹಣದುಬ್ಬರ ದರ ಋಣಾತ್ಮಕ ಚಲನೆಯಲ್ಲೇ ಮುಂದುವರಿದಿದೆ. ಜೂನ್ 13ಕ್ಕೆ ಕೊನೆಗೊಂಡ ವಾರದಲ್ಲಿ ಶೇಕಡಾ (-)1.14ರಷ್ಟಿದ್ದ ಸಗಟು ಸೂಚ್ಯಂಕವು ಪ್ರಸಕ್ತ ವಾರದಲ್ಲಿ ಅಲ್ಪ ಪ್ರಮಾಣದ ಏರಿಕೆ ಕಂಡಿದ್ದರೂ ಸತತ ಮೂರನೇ ವಾರವೂ ಋಣಾತ್ಮಕ ಫಲಿತಾಂಶವನ್ನೇ ನೀಡಿದೆ.ಕಳೆದ ವರ್ಷದ ಜೂನ್ ತಿಂಗಳ ಪ್ರಸಕ್ತ ವಾರದಲ್ಲಿ ಹಣದುಬ್ಬರ ದರವು ಶೇಕಡಾ 11.91 ಆಗಿತ್ತು. ಸರಕಾರದ ಕಾಳಜಿಯಿಂದಾಗಿ ಆಗ ಬೆಲೆಯೇರಿಕೆ ದಾಖಲಾಗಿತ್ತು.ಜೂನ್ 20ಕ್ಕೆ ಕೊನೆಗೊಂಡ ವಾರದಲ್ಲಿ ಆಹಾರೋತ್ಪನ್ನಗಳಾದ ಫಲವಸ್ತು ಮತ್ತು ತರಕಾರಿಗಳಲ್ಲಿ ಶೇಕಡಾ 0.6ರ ಹಾಗೂ ಆಹಾರೇತರ ವಸ್ತುಗಳಲ್ಲಿ ಶೇಕಡಾ 0.3ರ ಏರಿಕೆಯಾಗಿದೆ.ಉಳಿದಂತೆ ಆಹಾರ ವಸ್ತುಗಳಾದ ಬೂಸಾ, ನೆಲಗಡಲೆ ಮತ್ತು ಕಚ್ಚಾ ಉಣ್ಣೆ ಬೆಲೆಗಳು ಕ್ರಮವಾಗಿ ಶೇಕಡಾ 4, ಶೇಕಡಾ 2 ಹಾಗೂ ಶೇಕಡಾ 4ರ ಹೆಚ್ಚಳ ದಾಖಲಾಗಿದೆ.ಅದೇ ಹೊತ್ತಿಗೆ ಆಹಾರೋತ್ಪನ್ನಗಳಾದ ಟೀ, ಕಡಲಮೀನು ವ್ಯಾಪಾರವು ಶೇಕಡಾ 4ರ ಕುಸಿತ ದಾಖಲಿಸಿದ್ದರೆ, ಜೋಳ ಶೇಕಡಾ 3ರ ಹಿಂಜರಿತ ಅನುಭವಿಸಿದೆ. |